ವಾಪಿ(ಗುಜರಾತ್): ರಣಭೀಕರ ಮಳೆಗೆ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಬಹುತೇಕ ಎಲ್ಲ ನದಿಗಳು ತುಂಬಿ ಹರಿಯುತ್ತಿರುವ ಕಾರಣ, ನದಿ ಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲಿ ಸಿಕ್ಕಿಹಾಕಿಕೊಂಡಿರುವ ಜನರ ರಕ್ಷಣಾ ಕಾರ್ಯಾಚರಣೆ ಜೋರಾಗಿದೆ. ದಕ್ಷಿಣ ಗುಜರಾತ್ನ ವಲ್ಸಾದ್ ಸೇರಿ ನವಸಾರಿಯ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ.
ನವಸಾರಿಯ ಗಣದೇವಿ ಪ್ರದೇಶದಲ್ಲಿ ಕಾವೇರಿ ನದಿ ತುಂಬ ಹರಿಯುತ್ತಿರುವ ಕಾರಣ ತೊರ್ನಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲಿನ ಜನರ ರಕ್ಷಣೆ ಮಾಡಲು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮಹತ್ವದ ಕಾರ್ಯಾಚರಣೆಯಲ್ಲಿ ಎರಡು ದಿನಗಳಿಂದ ಗ್ರಾಮದ ಛಾವಣಿಯಲ್ಲಿ ನಿಂತಿದ್ದ 72 ವರ್ಷದ ಅಜ್ಜಿ ಮತ್ತು 11 ತಿಂಗಳ ಮೊಮ್ಮಗಳು ಹಾಗೂ ಆಕೆಯ ತಾಯಿಯ ರಕ್ಷಣೆ ಮಾಡಲಾಗಿದೆ. ಸದ್ಯ ಅವರನ್ನ ಪುನಶ್ಚೇತನ ಶಿಬಿರದಲ್ಲಿ ಬಿಡಲಾಗಿದೆ.