ನವದೆಹಲಿ : ಜೂನ್ 13 ರ ಹೊತ್ತಿಗೆ ದೇಶದ ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಸಾಗಣೆಗಳಲ್ಲಿನ ಒಟ್ಟಾರೆ ಕಲ್ಲಿದ್ದಲು ದಾಸ್ತಾನು 110.58 ಮಿಲಿಯನ್ ಟನ್‌ಗಳನ್ನು ತಲುಪಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ 76.67 ಮಿಲಿಯನ್ ಟನ್ ಸಂಗ್ರಹಕ್ಕೆ ಹೋಲಿಸಿದರೆ ಶೇಕಡಾ 44.22 ರಷ್ಟು ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ, ಜೂನ್ 13 ರಂದು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನಲ್ಲಿ ಪಿಟ್‌ಹೆಡ್ ಕಲ್ಲಿದ್ದಲು ದಾಸ್ತಾನು 59.73 ಮಿಲಿಯನ್ ಟನ್‌ಗಳಷ್ಟಿತ್ತು. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿದ್ದ 47.49 ಮಿಲಿಯನ್ ಟನ್ ಸಂಗ್ರಹಕ್ಕೆ ಹೋಲಿಸಿದರೆ ಶೇಕಡಾ 25.77 ರಷ್ಟು ಏರಿಕೆಯಾಗಿದೆ.
ಅದೇ ಸಮಯದಲ್ಲಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಗೆ ಸಂಬಂಧಿಸಿದಂತೆ, ಜೂನ್ 13 ರ ಹೊತ್ತಿಗೆ 2023-24 ರ ಸಂಚಿತ ಸಾಧನೆಯು 164.84 ಮಿಲಿಯನ್ ಟನ್‌ಗಳಷ್ಟಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 156.83 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ ಶೇಕಡಾ 5.11 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹೀಗಾಗಿ ವಿದ್ಯುತ್ ವಲಯದ ಇಂಧನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟು ಕಲ್ಲಿದ್ದಲಿನ ಸಂಗ್ರಹ ಈಗ ದೇಶದಲ್ಲಿದೆ.
ಒಟ್ಟಾರೆ ಕಲ್ಲಿದ್ದಲು ರವಾನೆ ಕೂಡ ಗಣನೀಯವಾಗಿ ಏರಿಕೆ ಕಂಡಿದ್ದು, 2023-24ರ ಜೂನ್ 13 ಕ್ಕೆ 196.87 ಮಿಲಿಯನ್ ಟನ್‌ಗಳನ್ನು ತಲುಪಿದೆ. ಇದು ಹಿಂದಿನ ವರ್ಷದ 182.78 ಮಿಲಿಯನ್ ಟನ್‌ಗಳ ರವಾನೆಗೆ ಹೋಲಿಸಿದರೆ ಶೇಕಡಾ 7.71 ರ ಬೆಳವಣಿಗೆ ದರವನ್ನು ಪ್ರತಿನಿಧಿಸುತ್ತದೆ.