ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕಲ್ಲಿದ್ದಲು ಕಳ್ಳ ಸಾಗಾಣೆ ಹಗರಣ ಕುರಿತಂತೆ ಪಶ್ಚಿಮ ಬಂಗಾಳದ ಒಟ್ಟು 13 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಸಮನ್ಸ್ ಜಾರಿ ಮಾಡಿದೆ. ಈ ಅಧಿಕಾರಿಗಳು ಆಗಸ್ಟ್ 21ರಿಂದ 31 ರೊಳಗೆ ದೆಹಲಿಯಲ್ಲಿರುವ ಮುಖ್ಯ ಕಚೇರಿಗೆ ಹಾಜರಾಗಬೇಕಿದೆ.
ಇದೇ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತವರ ಪತ್ನಿ ರುಜಿರಾ ಅವರ ವಿಚಾರಣೆ ನಡೆಸಿದ್ದಾರೆ. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬುಲಾವ್ ಬಂದಿದ್ದು ಈ ಪೈಕಿ ಇಬ್ಬರು ಎಡಿಜಿಪಿ, ಮತ್ತಿಬ್ಬರು ಡಿಐಜಿ ಹಾಗೂ ನಾಲ್ವರು ಎಸ್ಪಿ ಶ್ರೇಣಿಯ ಅಧಿಕಾರಿಗಳಿದ್ದಾರೆ ಎಂಬುದು ಗಮನಾರ್ಹ.
ಈಗಾಗಲೇ ನಾವು ಹೆಚ್ಚುವರಿ ಎಸ್ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳಂತಹ ಕಿರಿಯ ಅಧಿಕಾರಿಗಳ ವಿಚಾರಣೆ ಮಾಡಿದ್ದೇವೆ. ಹಗರಣದ ಕುರಿತಾಗಿ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಹಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸಲು ಮುಂದಾಗಿದ್ದೇವೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದರು.