ಅಸನ್ಸೋಲ್/ ಕೋಲ್ಕತಾ (ಪಶ್ಚಿಮ ಬಂಗಾಳ):ಕಲ್ಲಿದ್ದಲು ಕಳ್ಳಸಾಗಣೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಮೊಲೊಯ್ ಘಟಕ್ ಅವರ ಹಲವು ನಿವಾಸಗಳ ಮೇಲೆ ಸಿಬಿಐ ಬುಧವಾರ ಬೆಳಗ್ಗೆ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಪಶ್ಚಿಮ ಬರ್ಧಮಾನ್ ಜಿಲ್ಲೆಯ ಅಸನ್ಸೋಲ್‌ನಲ್ಲಿರುವ ಘಟಕ್ ಅವರ ಮೂರು ಮನೆಗಳು ಮತ್ತು ಕೋಲ್ಕತ್ತಾದ ಲೇಕ್ ಗಾರ್ಡನ್ಸ್ ಪ್ರದೇಶದ ಒಂದು ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಕೇಂದ್ರ ಅರೆಸೇನಾ ಸಿಬ್ಬಂದಿಯ ಬೃಹತ್ ತುಕಡಿಯಿಂದ ಭದ್ರತೆ ಪಡೆದುಕೊಂಡಿರುವ ಸಿಬಿಐ, ಹಗರಣಕ್ಕೆ ಸಂಬಂಧಿಸಿದಂತೆ ಈ ಆಸ್ತಿಗಳಲ್ಲಿ ಶೋಧ ನಡೆಸಿತು. ಮಹಿಳಾ ಅಧಿಕಾರಿಗಳು ಸಹ ಶೋಧ ತಂಡದಲ್ಲಿದ್ದರು.
ಕಲ್ಲಿದ್ದಲು ಕಳ್ಳಸಾಗಣೆ ಹಗರಣದಲ್ಲಿ ಅವರ ಹೆಸರು ಕೇಳಿಬಂದಿದ್ದು, ಹಗರಣದಲ್ಲಿ ಅವರ ಪಾತ್ರವೇನು ಎಂಬುದನ್ನು ನಾವು ಕಂಡುಹಿಡಿಯಬೇಕಾಗಿದೆ. ಹಗರಣದಲ್ಲಿ ಘಟಕ್ ಭಾಗಿಯಾಗಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ ಎಂದು ಸಿಬಿಐ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ದಾಳಿ ನಡೆದಾಗ ಘಟಕ್ ತಮ್ಮ ಯಾವುದೇ ನಿವಾಸದಲ್ಲಿ ಇರಲಿಲ್ಲ. ರಾಜ್ಯ ಕಾನೂನು ಸಚಿವರಾಗಿರುವ ಘಟಕ್ ಅವರ ಕುಟುಂಬ ಸದಸ್ಯರಿಂದ ಮೊಬೈಲ್ ಫೋನ್‌ಗಳನ್ನು ಸಿಬಿಐ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅವರನ್ನು ಅವರ ಅಸನ್ಸೋಲ್ ಮನೆಯ ಒಂದು ಕೋಣೆಯಲ್ಲಿ ಕೂರಿಸಲಾಗಿದೆ ಎಂದು ಅವರು ಹೇಳಿದರು.
ದಾಳಿ ನಡೆದಾಗ ಘಟಕ್ ನಿವಾಸದ ಸುತ್ತಲಿನ ಸಂಪೂರ್ಣ ಪ್ರದೇಶಗಳನ್ನು ಕೇಂದ್ರ ಪಡೆಗಳು ಸುತ್ತುವರಿದಿದ್ದವು. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋಲ್ಕತ್ತಾದ ನಾಲ್ಕು ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದೆ. ಅಸನ್ಸೋಲ್ ಉತ್ತರ ಶಾಸಕ ಘಟಕ್ ಅವರು ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಮ್ಮೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಅದರ ದೆಹಲಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಆದಾಗ್ಯೂ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ನೀಡಿದ ಹಲವಾರು ಸಮನ್ಸ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.