ನವದೆಹಲಿ: ವಿವಿಧ ರಾಜ್ಯಗಳಲ್ಲಿನ ಕಲ್ಲಿದ್ದಲು ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಗೃಹ ಸಚಿವ ಅಮಿತ್ ಶಾ ಇಂದು ಚರ್ಚೆ ನಡೆಸಿದ್ದಾರೆ.
ದೇಶದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಮತ್ತು ಇತರ ಸಂಬಂಧಿತ ಸವಾಲುಗಳ ಕುರಿತು ಮಾತುಕತೆ ನಡೆಸಿದ್ದಾರೆ. ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ಸಚಿವರ ಚರ್ಚೆ ವೇಳೆ ಉಪಸ್ಥಿತರಿದ್ದರು. ಈ ವರ್ಷ ಸುರಿದ ಭಾರಿ ಮಳೆಯಿಂದ ಕಲ್ಲಿದ್ದಲು ಉತ್ಪಾದನೆ ಮತ್ತು ಪೂರೈಕೆ ಸಮರ್ಪಕವಾಗಿ ಆಗದ್ದಕ್ಕೆ ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾಹಿತಿಯ ಪ್ರಕಾರ, ದೇಶದ ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕೊರತೆ ಎದುರಾಗಿದ್ದು, ಇದು ವಿದ್ಯುತ್ ಬಿಕ್ಕಟ್ಟಿಗೆ ಕಾರಣವಾಗಬಹುದು. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಸುವ 135 ಥರ್ಮಲ್ ಪ್ಲಾಂಟ್‌ಗಳು 106 ಅಥವಾ 80 ಪ್ರತಿಶತದಷ್ಟು ನಿರ್ಣಾಯಕ ಹಂತದಲ್ಲಿವೆ. ಮುಂದಿನ 6-7 ದಿನಗಳವರೆಗೆ ಮಾತ್ರ ಇವು ದಾಸ್ತಾನು ಹೊಂದಿವೆ.
ಪ್ರಮುಖ ನಾಲ್ಕು ರಾಜ್ಯಗಳಲ್ಲಿ ಕಲ್ಲಿದ್ದಲು ಪೂರೈಕೆಯ ಕೊರತೆಗೆ ನಾಲ್ಕು ಕಾರಣಗಳನ್ನು ನೀಡಿರುವ ವಿದ್ಯುತ್ ಸಚಿವಾಲಯ, ಆರ್ಥಿಕತೆಯ ಪುನರುಜ್ಜೀವನದ ಕಾರಣದಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ. 2021ರ ಸೆಪ್ಟೆಂಬರ್‌ನಲ್ಲಿ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಕಲ್ಲಿದ್ದಲು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಇಳಿಕೆಗೆ ಕಾರಣವಾಗುವ ಆಮದು ಕಲ್ಲಿದ್ದಲಿನ ಬೆಲೆಯಲ್ಲಿ ಹೆಚ್ಚಳ ಹಾಗೂ ಮುಂಗಾರು ಆರಂಭಕ್ಕೆ ಮುನ್ನ ಸಮರ್ಪಕ ಕಲ್ಲಿದ್ದಲು ದಾಸ್ತಾನು ಮಾಡಿಲ್ಲ ಎಂದು ಹೇಳಿದೆ.
ಇದನ್ನೂ ಓದಿ:ಕೊರತೆ ನಡುವೆಯೂ ಕೋಲ್ ಇಂಡಿಯಾ ವಿದ್ಯುತ್ ಸ್ಥಾವರಗಳಿಗೆ ಇಂಧನ ಪೂರೈಕೆ