ನವದೆಹಲಿ : ದೇಶಾದ್ಯಂತ ಉಷ್ಣ ವಿದ್ಯುತ್ ಸ್ಥಾವರಗಳ ನಿರಂತರ ಕಾರ್ಯಾಚರಣೆಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ ಎಂದು ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಕಲ್ಲಿದ್ದಲು ಇಂಧನ ಲಭ್ಯತೆಯಿಲ್ಲದ ಕಾರಣ ಯಾವುದೇ ವಿದ್ಯುತ್ ಸ್ಥಾವರವನ್ನು ಮುಚ್ಚಲಾಗಿಲ್ಲ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಕೆಲ ಸ್ಥಾವರಗಳು ಮುಚ್ಚಲ್ಪಟ್ಟಿದ್ದರೂ ಅದು ಕಲ್ಲಿದ್ದಲು ಕೊರತೆ ಕಾರಣದಿಂದ ಅಲ್ಲ ಎಂದು ಕೇಂದ್ರ ತಿಳಿಸಿದೆ.
ಜುಲೈ 16 ರ ಹೊತ್ತಿಗೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಸ್ಟಾಕ್ 33.46 ಮಿಲಿಯನ್ ಟನ್‌ಗಳಷ್ಟಿದೆ, ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ 28 ಶೇಕಡಾ ಹೆಚ್ಚಾಗಿದೆ. ಪಿಟ್‌ಹೆಡ್ ಕಲ್ಲಿದ್ದಲು ದಾಸ್ತಾನು ಸೇರಿದಂತೆ ಎಲ್ಲ ಸ್ಥಳಗಳಲ್ಲಿನ ಗಣಿಗಳಲ್ಲಿ ಕಲ್ಲಿದ್ದಲು ಲಭ್ಯತೆ, ಸಾರಿಗೆಯಲ್ಲಿರುವ ಕಲ್ಲಿದ್ದಲು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಸ್ಟಾಕ್ 103 ಮಿಲಿಯನ್ ಟನ್‌ಗಳಾಗಿದೆ. ಇದು ಕಳೆದ ವರ್ಷ 76.85 ಮಿಲಿಯನ್ ಟನ್‌ಗಳಷ್ಟಿತ್ತು. ಈ ವರ್ಷ ದಾಸ್ತಾನು ಶೇಕಡಾ 34 ರಷ್ಟು ಹೆಚ್ಚಾಗಿದೆ.
ಸಚಿವಾಲಯವು ಎಲ್ಲ ಕೇಂದ್ರ ಉತ್ಪಾದನಾ ಕಂಪನಿಗಳು ಮತ್ತು ರಾಜ್ಯ ಘಟಕಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಮತ್ತು ವಿದ್ಯುತ್ ವಲಯಕ್ಕೆ ಯಾವುದೇ ರೀತಿಯಲ್ಲೂ ಕಲ್ಲಿದ್ದಲಿನ ಕೊರತೆಯಿಲ್ಲ ಎಂದು ಕಲ್ಲಿದ್ದಲು ಸಚಿವಾಲಯ ಹೇಳಿದೆ. ಜುಲೈನಲ್ಲಿ ಕಲ್ಲಿದ್ದಲು ಉತ್ಪಾದನೆಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಹೆಚ್ಚಾಗಿದೆ. ವಾಸ್ತವವಾಗಿ ಕಲ್ಲಿದ್ದಲು ಉತ್ಪಾದನೆಯ ಮೇಲೆ ಮಳೆ ಅಂಥ ಪರಿಣಾಮ ಬೀರಿಲ್ಲ. ಮುಂಗಾರು ಹಂಗಾಮಿಗೆ ಗಣಿವಾರು ಮುಂಗಡ ಯೋಜನೆ ಮೂಲಕ ಇದು ಸಾಧ್ಯವಾಗಿದೆ ಎಂದು ಕಲ್ಲಿದ್ದಲು ಸಚಿವಾಲಯವು ಹೇಳಿದೆ.