ನವದೆಹಲಿ: ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಸಮಸ್ಯೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಈ ಹೊತ್ತಲ್ಲೇ ಕೇಂದ್ರ ಸರ್ಕಾರವು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ದೇಶದಲ್ಲಿ ವಿದ್ಯುತ್ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಕಲ್ಲಿದ್ದಲು ಲಭ್ಯವಿದೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಉಲ್ಲೇಖಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 400 ಲಕ್ಷ ಟನ್‌ಗಳಿಗಿಂತ ಹೆಚ್ಚು ದಾಸ್ತಾನು ಹೊಂದಿದೆ.
ಅದನ್ನು ವಿದ್ಯುತ್ ಸ್ಥಾವರಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಲ್ಲಿದ್ದಲು ಪೂರೈಕೆಯಿಂದ ಸೆಪ್ಟೆಂಬರ್ 2021ರವರೆಗೆ ಶೇ.24ರಷ್ಟು ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ.
ಈ ಬಾರಿ ಮುಂಗಾರು ವಿಸ್ತರಣೆಯಿಂದಾಗಿ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿದೆ. ಆದಾಗ್ಯೂ, ಕಲ್ಲಿದ್ದಲಿನ ಸಮಸ್ಯೆ ಉದ್ಭವಿಸಿಲ್ಲ ಎಂದು ಸಚಿವಾಲಯ ತಿಳಿಸಿದೆ. ಕಲ್ಲಿದ್ದಲು ಗಣಿಗಾರಿಕಾ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರೂ, ಸಿಐಎಲ್ ಈ ವರ್ಷ 255 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ವಿದ್ಯುತ್ ವಲಯಕ್ಕೆ ಪೂರೈಸಿದೆ.
ಇದನ್ನೂ ಓದಿ: 'ಈಟಿವಿ ಭಾರತ' ಜತೆ ಪವರ್ ಮಿನಿಸ್ಟರ್ ಮಾತುಕತೆ.. ವಿದ್ಯುತ್ ಬಿಕ್ಕಟ್ಟು ಆರೋಪ ತಳ್ಳಿ ಹಾಕಿದ ಸಿಂಗ್
ಸಿಐಎಲ್ನಿಂದ ವಿದ್ಯುತ್ ವಲಯಕ್ಕೆ ದಿನಕ್ಕೆ 14 ಲಕ್ಷ ಟನ್ಗಳಿಗಿಂತಲೂ ಅಧಿಕ ಕಲ್ಲಿದ್ದಲನ್ನು ಪೂರೈಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ15 ಲಕ್ಷ ಟನ್ ಕಲ್ಲಿದ್ದಲನ್ನು ಪೂರೈಸಲಾಗುತ್ತಿದೆ. ಅಕ್ಟೋಬರ್ 2021ರ ಅಂತ್ಯದ ವೇಳೆಗೆ ದಿನಕ್ಕೆ 16 ಲಕ್ಷ ಟನ್‌ಗಳಿಗಿಂತ ಹೆಚ್ಚು ಕಲ್ಲಿದ್ದಲು ಪೂರೈಕೆಯಾಗುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಪೂರೈಕೆಯು ದಾಖಲೆಯ ಗರಿಷ್ಠ ಮಟ್ಟದಲ್ಲಿದೆ ಎಂದು ನಿರೀಕ್ಷಿಸಲಾಗಿದೆ.