ಲಖನೌ, ಉತ್ತರ ಪ್ರದೇಶ:ಸತತವಾಗಿ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಗೆ ಲಖನೌದಲ್ಲಿರುವ ಲೋಕಭವನದಲ್ಲಿ ಮೊದಲ ಸಂಪುಟ ಸಭೆ ನಡೆಸಿದ ಅವರು ಮುಂದಿನ 3 ತಿಂಗಳಿಗೆ ಉತ್ತರ ಪ್ರದೇಶದ ಜನರಿಗೆ ಉಚಿತ ಪಡಿತರ ನೀಡಲಿದ್ದೇವೆ ಎಂದು ಘೋಷಿಸಿದ್ದು, ಈ ಮೂಲಕ ರಾಜ್ಯದ 15 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ಅಂತ್ಯೋದಯ ಕಾರ್ಡ್ ಹೊಂದಿರುವ ಬಡ ಫಲಾನುಭವಿಗಳಿಗೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳವರೆಗೆ ಉಚಿತ ಪಡಿತರವನ್ನು ನೀಡಲಾಗುವುದು. ರಾಷ್ಟ್ರೀಯತೆ, ಸುರಕ್ಷತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ರಾಜ್ಯದ ಜನತೆಗೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.