ಲಖನೌ(ಉತ್ತರ ಪ್ರದೇಶ): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್ ಇಂದು ವಿಧಾನಸಭೆಯಲ್ಲಿ ನಡೆದ ಚುನಾಯಿತ ಶಾಸಕರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವೇಳೆ ಪ್ರತಿಪಕ್ಷ ನಾಯಕ ಅಖಿಲೇಶ್ ಯಾದವ್ ಅವರನ್ನು ಕಂಡು, ನಗುಮುಖದೊಂದಿಗೆ ಹಸ್ತಲಾಘವ ಮಾಡಿದರು. ಅಷ್ಟೇ ಅಲ್ಲ, ಅಖಿಲೇಶ್ ಭುಜದ ಮೇಲೂ ಕೈ ಹಾಕಿ ಗಮನ ಸೆಳೆದರು.
ರಾಜಕೀಯ ವೈರತ್ವ ಮರೆತು ಪರಸ್ಪರ ಹಸ್ತಲಾಘವ ಮಾಡಿದ ಸಿಎಂ ಯೋಗಿ-ಅಖಿಲೇಶ್ ಕಳೆದ ಕೆಲವು ವಾರಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿತ್ತು. ಕಳೆದ ಶನಿವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಮತ್ತೊಂದು ಅವಧಿಗೆ ಸಿಎಂ ಆಗಿ ಪ್ರಮಾಣ ಕೈಗೊಂಡರು. ಇದರ ಬೆನ್ನಲ್ಲೇ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಸಮಾಜವಾದಿ ಪಕ್ಷ ಅಧಿಕೃತವಾಗಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದ್ದು, ಅಖಿಲೇಶ್ ಯಾದವ್ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆಗೆ ನೂತನ ಶಾಸಕರಾಗಿ ಆಯ್ಕೆಯಾಗಿರುವ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಇಂದು ನಡೆಯಿತು. ಸಿಎಂ ಯೋಗಿ, ಅಖಿಲೇಶ್ ಯಾದವ್ ಸೇರಿದಂತೆ ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಮಾತನಾಡಿರುವ ಯೋಗಿ ಆದಿತ್ಯನಾಥ್, ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಲ್ಲರಿಗೂ ಸ್ವಾಗತ. ಸದಸ್ಯರು ಸದನದಲ್ಲಿ ಶಿಸ್ತು ಮತ್ತು ಸಭ್ಯತೆ ಕಾಯ್ದುಕೊಂಡು ಹೋಗುವ ಭರವಸೆ ಇದೆ ಎಂದರು. ಯುಪಿ ಚುನಾವಣೆಯಲ್ಲಿ ಬಿಜೆಪಿ 273 ಸ್ಥಾನಗಳಲ್ಲಿ ಗೆದ್ದಿದ್ದು, ಸಮಾಜವಾದಿ ಪಕ್ಷ 111 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.
ಇದನ್ನೂ ಓದಿ:ಅಡುಗೆಯಲ್ಲಿ ವಿಶ್ವದಾಖಲೆ ಬರೆದ ಲತಾ ಟಂಡನ್ ಕೌಟುಂಬಿಕ ಕಲಹ: ಪತಿ ವಿರುದ್ಧ ಗಂಭೀರ ಆರೋಪ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ, 52 ಮಂದಿ ಸಂಪುಟ ದರ್ಜೆ ಹಾಗೂ ಸ್ವತಂತ್ರ ಖಾತೆ ಸಚಿವರಾಗಿಯೂ ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.