ಲಖನೌ(ಉತ್ತರ ಪ್ರದೇಶ): ಸೋಮವಾರ ಬೆಳಗ್ಗೆ ಲಖನೌದ ಮಹೋನಾ ಮುಂಭಾಗ ಅಸ್ನಾಹ ಪ್ರದೇಶದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಸುಮಾರು 46 ಜನರಿದ್ದ ಟ್ರ್ಯಾಕ್ಟರ್ ಟ್ರಾಲಿಯು ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಕೊಳಕ್ಕೆ ಪಲ್ಟಿಯಾಗಿ ಬಿದ್ದ ಪರಿಣಾಮ ಎಂಟು ಮಂದಿ ಮಹಿಳೆಯರು ಹಾಗೂ ಇಬ್ಬರು ಮಕ್ಕಳ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 36 ಮಂದಿ ಗಾಯಗೊಂಡಿದ್ದಾರೆ.
ಎಲ್ಲ ಪ್ರಯಾಣಿಕರು ನವರಾತ್ರಿಯ ಮೊದಲ ದಿನದಂದು ಬಕ್ಷಿ ಕಾ ತಲಾಬ್ ಪ್ರದೇಶದ ಚಂದ್ರಿಕಾ ದೇವಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಒಂಬತ್ತು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಮುಳುಗುಗಾರರು ಉಳಿದವರಿಗಾಗಿ ಹೆಚ್ಚಿನ ಶೋಧ ಕಾರ್ಯ ನಡೆಸುತ್ತಿದ್ದಾರೆ.