ಲಖನೌ(ಉತ್ತರಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ತಮ್ಮ ಸರ್ಕಾರ 100 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಸರ್ಕಾರದ ಮಹತ್ವದ ಸಾಧನೆಗಳನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಲೋಕಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್, ಮೌರ್ಯ ಬ್ರಿಜೇಶ್ ಪಾಠಕ್, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ, ಮುಖ್ಯ ಕಾರ್ಯದರ್ಶಿ ದುರ್ಗಾಶಂಕರ ಮಿಶ್ರಾ ಸೇರಿದಂತೆ ಹಲವು ಪ್ರಮುಖರ ಸಮ್ಮುಖದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸರ್ಕಾರದ 100 ದಿನಗಳ ಸಾಧನೆಯ ಮಾಹಿತಿ ನೀಡಿದರು.
ಪ್ರಾರ್ಥನಾ ಸ್ಥಳಗಳಿಂದ ಮೊದಲ ಬಾರಿಗೆ ಮೈಕ್‌ಗಳನ್ನು ತೆಗೆದುಹಾಕಲಾಗಿದೆ. ಪೋಕ್ಸೊ ಕಾಯ್ದೆಯಡಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ದೌರ್ಜನ್ಯವೆಸಗುವ ಅಪರಾಧಿಗಳನ್ನು ಪರಿಣಾಮಕಾರಿಯಾಗಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಇಂದು ರಾಜ್ಯವು ಪ್ರತಿ ತಹಸಿಲ್‌ಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸುವತ್ತ ಸಾಗುತ್ತಿದೆ. ರಾಜ್ಯದ ಜಿಡಿಪಿ ದುಪ್ಪಟ್ಟಾಗಿದೆ, ತಲಾ ಆದಾಯವೂ ದುಪ್ಪಟ್ಟಾಗಿದೆ, ಬಜೆಟ್ ಕೂಡ ದುಪ್ಪಟ್ಟಾಗಿದೆ ಎಂದು ಸಿಎಂ ಆದಿತ್ಯನಾಥ್ ಸರ್ಕಾರದ ಸಾಧನೆಯನ್ನು ಹೇಳಿದರು.
ಪ್ರಧಾನಿ ಮಾರ್ಗದರ್ಶನದಲ್ಲಿ ಮುನ್ನಡೆ:ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು 100 ದಿನಗಳಾಗಿವೆ. ರಾಜ್ಯದ ಜನತೆ ಪ್ರಧಾನಿಯವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಬಹುಮತ ನೀಡುವ ಮೂಲಕ ವಿಶ್ವಾಸ ವ್ಯಕ್ತಪಡಿಸಿದರು. ಮೊದಲ ಬಾರಿಗೆ ಸದನ ಕಾಂಗ್ರೆಸ್ ಮುಕ್ತವಾಗುತ್ತಿದೆ. ಇದರ ನಂತರ, ಎರಡು ಲೋಕಸಭಾ ಚುನಾವಣೆಗಳು ನಡೆದಿದ್ದು, ರಾಂಪುರ ಮತ್ತು ಅಜಂಗಢ್ ಎರಡೂ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಇದು ಪ್ರಧಾನಿಯವರ ಉತ್ತಮ ಸಮನ್ವಯ ಆಡಳಿತಕ್ಕೆ ಜನರಿಂದ ಸಿಕ್ಕ ಆಶೀರ್ವಾದವಾಗಿದೆ ಎಂದು ಸಿಎಂ ಯೋಗಿ ಹೇಳಿದರು.
ಉತ್ತರ ಪ್ರದೇಶದ ಇತಿಹಾಸದಲ್ಲಿ 37 ವರ್ಷಗಳ ನಂತರ ಸರ್ಕಾರವೊಂದು ಎರಡನೇ ಬಾರಿಗೆ ಭರ್ಜರಿ ಬಹುಮತ ಪಡೆದು 5 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವ ಸಮಯ ಬಂದಿದೆ. ದೇಶದ ಜನಸಂಖ್ಯೆಯ ದೃಷ್ಟಿಯಿಂದ ಉತ್ತರ ಪ್ರದೇಶ ಅತಿ ದೊಡ್ಡ ರಾಜ್ಯವಾಗಿದ್ದು, ದೇಶದ ಆರ್ಥಿಕತೆಯಲ್ಲಿ ರಾಜ್ಯವು ಉತ್ತಮ ಕೊಡುಗೆ ನೀಡಬಲ್ಲದು ಎಂಬುದು ಪ್ರಧಾನಿ ಅವರ ಅಭಿಪ್ರಾಯವಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.