ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಈ ಮಧ್ಯೆ ಬಿಜೆಪಿ, ಕಾಂಗ್ರೆಸ್, ಎಸ್‌ಪಿ ಹಾಗು ಬಿಎಸ್ಪಿ ಚುನಾವಣೆ ಕಣದಲ್ಲಿ ಪ್ರಚಾರ ನಡೆಸಿ ಜಯ ನಮ್ಮದೇ ಎಂದು ಬೀಗುತ್ತಿದ್ದಾರೆ.
ಇದೀಗ 3ನೇ ಹಂತದ ಮತದಾನ ಮುಗಿದಿದೆ. ಇನ್ನೂ 4 ಹಂತಗಳ ಮತದಾನ ಬಾಕಿ ಇದೆ. ಈ ಮಧ್ಯೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಈಟಿವಿ ಭಾರತ್ ಸಂಸ್ಥೆಯ ಯುಪಿ ಬ್ಯೂರೋ ಮುಖ್ಯಸ್ಥ ಅಲೋಕ್ ತ್ರಿಪಾಠಿ ಸಂದರ್ಶನ ಮಾಡಿದರು.
ರಾಷ್ಟ್ರೀಯವಾದ, ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಕೊಡುವುದು ಬಿಜೆಪಿಯ ಅಜೆಂಡಾ. ಯಾವುದೇ ಜಾತಿ- ಮತಗಳ ಬೇಧವಿಲ್ಲದೇ ಬಿಜೆಪಿ ತಮ್ಮನ್ನೇ ಮೇಲಕ್ಕೆತ್ತಲಿದೆ ಅನ್ನೋದು ಜನರ ನಂಬಿಕೆ. ಆದ್ದರಿಂದ ಈಗಾಗಲೇ ನಡೆದಿರುವ 3 ಹಂತದ ಚುನಾವಣೆಯಲ್ಲಿ ಜನ ಬಿಜೆಪಿ ಪರ ಇದ್ದಂತೆ ಕಾಣುತ್ತಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಹ್ಮದಾಬಾದ್ ಸ್ಫೋಟ ಪ್ರಕರಣದ ಅಪರಾಧಿಯ ತಂದೆಯು ಅಖಿಲೇಶ್ ಯಾದವ್ ಜೊತೆಗೆ ಇರುವ ಫೋಟೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿ, ಸಮಾಜವಾದಿ ಕೆಟ್ಟ ಪಕ್ಷ. 2013ರಲ್ಲಿ ಆ ಪಕ್ಷ ಅಧಿಕಾರದಲ್ಲಿದ್ದಾಗ ಅಹ್ಮದಾಬಾದ್ ಸ್ಫೋಟ ಪ್ರಕರಣದ ಉಗ್ರರ ಮೇಲಿನ ಕೇಸುಗಳನ್ನು ಹಿಂಪಡೆಯಲು ಯತ್ನಿಸಿತ್ತು. ಮತಬ್ಯಾಂಕ್ ರಾಜಕಾರಣಕ್ಕಾಗಿ ಹಾಗೆಯೇ ಮಾಡಿತ್ತು. ರಾಜ್ಯದಲ್ಲಿ ಆಗ ಗೂಂಡಾಗಳಿಗೆ ಹಾಗೂ ಮಾಫಿಯಾಗೆ ಮಣೆ ಹಾಕಿರುವ ಇತಿಹಾಸ ಎಲ್ಲರಿಗೂ ಗೊತ್ತಿದೆ. ಇದೀಗ ಗುಜರಾತ್ ಹೈಕೋರ್ಟ್ ಆ ಪ್ರಕರಣ ಸಂಬಂಧ 38 ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದು, ಅದರಲ್ಲಿ 9 ಜನ ಉತ್ತರ ಪ್ರದೇಶದವರಿದ್ದಾರೆ. ಅಜಮ್ಘರ್ದ ಸಂಜಾರ್ಪುರ್ ಗ್ರಾಮದ ಸುತ್ತ ಕೆಲ ಉಗ್ರರಿದ್ದಾರೆ. ಉಗ್ರ ಕೃತ್ಯಗಳಲ್ಲಿ ಭಾಗಿಯಾದವನ ತಂದೆ ಎಸ್ಪಿಯ ಸಕ್ರಿಯ ಕಾರ್ಯಕರ್ತ ಮತ್ತು ಪ್ರಚಾರಕ ಎಂದು ಕಿಡಿಕಾರಿದರು.
ಅಖಿಲೇಶ್ ಯಾದವ್ ಅವರ ಬುಲ್ಡೋಜ್ ವಾಲೆ ಬಾಬಾ ವ್ಯಂಗ್ಯದ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್, ದುರದೃಷ್ಟವಶಾತ್ ಎಸ್‌ಪಿ 4 ಬಾರಿ ಅಧಿಕಾರಕ್ಕೆ ಬಂದಿತ್ತು. ಆದರೂ ಕೂಡ ಬಡವರು, ಯುವಕರು ಮತ್ತು ರೈತರ ಬಗ್ಗೆ ಕೆಲಸ ಮಾಡಿಲ್ಲ. ಆದ್ರೆ ಅವರಿಗೆ ಉಗ್ರರ ಬಗ್ಗೆ ಕಾಳಜಿ ಇದೆ. ಆದ್ರೆ ನಾವು ಹೇಳಿದ್ದನ್ನು ಮಾಡಿದ್ದೇವೆ. ಅಪರಾಧಿಗಳಿಗೆ ತಕ್ಕ ಶಾಸ್ತಿ ಮಾಡಿದ್ದೇವೆ, ಅದನ್ನು ಮುಂದುವರಿಸುತ್ತೇವೆ ಎಂದರು.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಂದರ್ಶನ ಗಲಭೆಕೋರರಿಂದಲೇ ಸರ್ಕಾರಿ ಆಸ್ತಿ ಹಾನಿಯನ್ನು ವಸೂಲಿ ಮಾಡುವ ಆದೇಶವನ್ನು ಸುಪ್ರೀಂಕೋರ್ಟ್ ಮಧ್ಯಸ್ಥಿಕೆಯ ನಂತರ ಹಿಂಪಡೆದ ಬಗ್ಗೆ ಸಿಎಂ ಉತ್ತರಿಸಿ, ಗಲಭೆಕೋರರರಿಂದ ವಸೂಲಿ ಮಾಡುವುದು ಆಡಳಿತಾತ್ಮಕ ಆದೇಶ, ಆ ಬಳಿಕ ಕಾಯ್ದೆ ರಚಿಸಿದ್ದೇವೆ. ಮೂರು ಟ್ರಿಬ್ಯುನಲ್ಗಳನ್ನೂ ರಚಿಸಿದ್ದೆವು. ಆದ್ರೆ ಆಡಳಿತಾತ್ಮಕ ಆದೇಶದ ಬದಲು ಟ್ರಿಬ್ಯುನಲ್ ಮೂಲಕ ವಸೂಲಿ ಮಾಡಿ ಅಂತ ಸುಪ್ರೀಂಕೋರ್ಟ್ ಹೇಳಿದೆ. ಅದರಂತೆ ಕ್ರಮ ಕೈಗೊಂಡಿದ್ದೇವೆ.
ಇನ್ನು ದೇಶದಲ್ಲಿ ಎದ್ದಿರುವ ಹಿಜಾಬ್ ವಿವಾದದ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿ, ಕರ್ನಾಟಕದಿಂದ ವಿವಾದ ಬಂದಿದೆ. ಸಂವಿಧಾನದ ಮೇಲೆ ದೇಶದ ವ್ಯವಸ್ಥೆ ಇದೆಯೇ ಹೊರತು ಯಾವುದೇ ವೈಯಕ್ತಿಕ ಅಥವಾ ಷರಿಯತ್ ಕಾನೂನಿನ ಮೇಲೆ ಅಲ್ಲ. ನಿಮ್ಮ ಮನೆಯಲ್ಲಿ ನಿಮ್ಮಷ್ಟದ ಬಟ್ಟೆ ಹಾಕಿಕೊಳ್ಳಬಹುದು. ಆದ್ರೆ ಯಾವುದೇ ಸಂಸ್ಥೆಯಲ್ಲಿ ಡ್ರೆಸ್ ಕೋಡ್ ಇದ್ರೆ ಅಲ್ಲಿ ಪಾಲಿಸಲೇಬೇಕು.
ನಾವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾತನಾಡಬೇಕು ಅಂತಾ ಅಂದುಕೊಂಡಿದ್ದೆವು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವನ್ನು ದೇಶವೇ ಸಂಭ್ರಮಿಸುತ್ತಿತ್ತು. ಆದ್ರೆ ಸಮಾಜವಾದಿ ಪಕ್ಷ ಮಾತ್ರ ಆ ದಿನ ಜಿನ್ನಾ ಹೊಗಳುತ್ತಿತ್ತು. ನಾವು ಯುವಕರಿಗೆ ಸ್ಮಾರ್ಟ್ ಫೋನ್ ಕೊಡ್ತಿದ್ದರೆ ಅವರು ಪಾಕ್ ಬಗ್ಗೆ ಮಾತಾಡ್ತಿದ್ದರು. ಎಸ್ಪಿನೇ ಈ ವಿಷಯ ಎತ್ತಿದ್ದು, ನಾವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ವಿಷಯದಲ್ಲೇ ಚುನಾವಣೆಗೆ ಹೋಗಿದ್ದೆವು ಎಂದು ಚುನಾವಣೆಯಲ್ಲಿ ಜಿನ್ನಾ ಮತ್ತು ಭಯೋತ್ಪಾದನೆ ವಿಷಯ ಏಕೆ ಪ್ರಸ್ತಾಪವಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದರು.
ಚುನಾವಣೆಯಲ್ಲಿ ಬಿಜೆಪಿ ಎಷ್ಟು ಕ್ಷೇತ್ರಗಳಲ್ಲಿ ಜಯಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸಿ, ಇದು 80 ವರ್ಸಸ್ 20 ಫೈಟ್ ಎಂದರು.