ಲಖನೌ(ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಎರಡನೇ ಅವಧಿಯ ಸಚಿವ ಸಂಪುಟ ರಚನೆಗೆ ದಿನಗಣನೇ ಆರಂಭಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ನೂತನ ಕ್ಯಾಬಿನೆಟ್ನಲ್ಲಿ 50 ಸಚಿವರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ.
ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿಯನ್ನ ಮತ್ತೊಂದು ಅವಧಿಗೆ ಅಧಿಕಾರಕ್ಕೆ ತರಲು ಯಶಸ್ವಿಯಾಗಿರುವ ಯೋಗಿ ಆದಿತ್ಯನಾಥ್ ಸದ್ಯ ದೆಹಲಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖರನ್ನ ಭೇಟಿ ಮಾಡಿ, ಸಚಿವ ಸಂಪುಟ ರಚನೆ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ.
ಮೂವರು ಡಿಸಿಎಂಗಳಿಗೆ ಮಣೆ?: ಯೋಗಿ ಆದಿತ್ಯನಾಥ್ 2.0 ಕ್ಯಾಬಿನೆಟ್ನಲ್ಲಿ ಮೂವರು ಉಪಮುಖ್ಯಮಂತ್ರಿಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದ್ದು, 50 ಶಾಸಕರಿಗೆ ಸಚಿವಗಿರಿ ನೀಡಲು ಮುಂದಾಗಿದ್ದಾಗಿ ತಿಳಿದು ಬಂದಿದೆ. ಈಗಾಗಲೇ ಬೇಬಿ ರಾಣಿ ಮೌರ್ಯಗೆ ಸಚಿವ ಸ್ಥಾನ ನೀಡುವುದು ಕೂಡ ಅಂತಿಮವಾಗಿದೆ ಎನ್ನಲಾಗ್ತಿದೆ.