ಚೆನ್ನೈ (ತಮಿಳುನಾಡು):ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ವಿರೋಧಿ ತಮಿಳುನಾಡು ರಾಜ್ಯದ ಮಸೂದೆಗೆ ಅನುಮೋದನೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ಮನವಿ ಮಾಡಿದರು. ಭಾರತೀಯ ಸಾಗರ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಷ್ಟ್ರಪತಿಗಳಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಿಎಂ ಮನವಿ ಪತ್ರ ಹಸ್ತಾಂತರಿಸಿದರು.
''ಪದವಿ ವೈದ್ಯಕೀಯ ಪದವಿ ಕೋರ್ಸ್‌ಗಳ ಮಸೂದೆ-2021 ಅನ್ನು ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯ ವಿಧಾನಸಭೆ ಅಂಗೀಕರಿಸಿತ್ತು. ಆದರೆ, ರಾಜ್ಯಪಾಲ ಆರ್.ಎನ್.ರವಿ ಅವರು ಈ ಮಸೂದೆಯನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದರು. ನಂತರ 2022ರ ಫೆಬ್ರವರಿಯಲ್ಲಿ ಮಸೂದೆಯನ್ನು ಸದನದಲ್ಲಿ ಮರುಪರಿಚಯಿಸಿ ಅಂಗೀಕರಿಸಲಾಗಿತ್ತು. ರಾಷ್ಟ್ರಪತಿಗಳ ಒಪ್ಪಿಗೆಯನ್ನು ಕಾಯ್ದಿರಿಸುವಂತೆ ರಾಜ್ಯಪಾಲರಿಗೆ ಮಸೂದೆಯನ್ನು ಮತ್ತೊಮ್ಮೆ ಕಳುಹಿಸಲಾಗಿದೆ. ಇದೀಗ ರಾಜ್ಯಪಾಲರು ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದ್ದಾರೆ'' ಎಂದು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಸಿಎಂ ಸ್ಟಾಲಿನ್ ತಿಳಿಸಿದ್ದಾರೆ.
''ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ ಮತ್ತು ಆಯುಷ್ ಸಚಿವಾಲಯದ ಪ್ರತಿಕ್ರಿಯೆಗಳ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯವು ಮಸೂದೆಯ ಕುರಿತು ಕೇಳಿದ ಎಲ್ಲ ಸ್ಪಷ್ಟೀಕರಣಗಳನ್ನು ತ್ವರಿತವಾಗಿ ಒದಗಿಸಲಾಗಿದೆ. ನಮ್ಮ ಪ್ರತ್ಯುತ್ತರಗಳ ನಂತರವೂ ಯಾವುದೇ ಪ್ರಗತಿ ಕಂಡುಬರದ ಕಾರಣ, ಆಗಸ್ಟ್ 14ರಂದು ಬರೆದ ನನ್ನ ಪತ್ರದಲ್ಲಿ ಈ ವಿಳಂಬದಿಂದ ಹಿಂದುಳಿದ ವಿದ್ಯಾರ್ಥಿಗಳು ಅವಕಾಶಗಳನ್ನು ಕಳೆದುಕೊಂಡಿರುವುದು ಮತ್ತು ಅನೇಕ ವಿದ್ಯಾರ್ಥಿಗಳ ಆತ್ಮಹತ್ಯೆಯಂತಹ ಹಲವಾರು ಪ್ರತಿಕೂಲ ಪರಿಣಾಮಗಳ ಬಗ್ಗೆ ಗಮನ ಸೆಳೆದು ಯಾವುದೇ ವಿಳಂಬ ಮಾಡದೆ ಮಸೂದೆಗೆ ಒಪ್ಪಿಗೆ ನೀಡುವಂತೆ ಒತ್ತಾಯಿಸಿದ್ದೇನೆ'' ಎಂದು ಸ್ಟಾಲಿನ್ ಉಲ್ಲೇಖಿಸಿದ್ದಾರೆ.