ಚೆನ್ನೈ : ತಮಿಳುನಾಡಿನಲ್ಲಿ ಕ್ರೀಡಾ ತರಬೇತಿ ಕೈಗೊಳ್ಳಲು ಮಣಿಪುರ ರಾಜ್ಯದ ಕ್ರೀಡಾಪಟುಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆಹ್ವಾನ ನೀಡಿದ್ದಾರೆ. ಈ ಸಂಬಂಧ ತಮಿಳುನಾಡು ಸರ್ಕಾರವು ಪ್ರಕಟಣೆ ಹೊರಡಿಸಿದೆ. ಆ ಹೇಳಿಕೆಯಲ್ಲಿ, 'ಕ್ರೀಡೆಯಲ್ಲಿ ತನ್ನ ಪರಾಕ್ರಮಕ್ಕೆ ಹೆಸರುವಾಸಿಯಾದ ರಾಜ್ಯ ಮಣಿಪುರದ ಪ್ರಸ್ತುತ ಪರಿಸ್ಥಿತಿಯನ್ನು ತಮಿಳುನಾಡು ಅತ್ಯಂತ ಕಳವಳ ಮತ್ತು ವೇದನೆಯಿಂದ ನೋಡುತ್ತದೆ' ಎಂದಿದೆ.
ಮಣಿಪುರ ಯಾವಾಗಲೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಚಾಂಪಿಯನ್ಗಳನ್ನು, ವಿಶೇಷವಾಗಿ ಮಹಿಳಾ ಚಾಂಪಿಯನ್ಗಳನ್ನು ನಿರ್ಮಿಸಿದೆ. ಖೇಲೋ ಇಂಡಿಯಾ ಯೂತ್ ಗೇಮ್ಸ್ 2024 ಅನ್ನು ಆಯೋಜಿಸಲು ತಮಿಳುನಾಡನ್ನು ಆಯ್ಕೆ ಮಾಡಲಾಗಿದೆ. ಈ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಪ್ರಸ್ತುತ, ಮಣಿಪುರದಲ್ಲಿ, ಏಷ್ಯನ್ ಗೇಮ್ಸ್ ಮತ್ತು ಇಂಡಿಯಾ ಯೂತ್ ಗೇಮ್ಸ್ನಂತಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ತರಬೇತಿ ನೀಡಲು ಪ್ರತಿಕೂಲ ಪರಿಸ್ಥಿತಿ ಇದೆ. ಹೀಗಾಗಿ, ತರಬೇತಿಗಾಗಿ ತಮಿಳುನಾಡಿಗೆ ಭೇಟಿ ನೀಡುವಂತೆ ಆಹ್ವಾನಿಸಲಾಗಿದೆ.
ಕ್ರೀಡಾ ತರಬೇತಿಗಾಗಿ ತಮಿಳುನಾಡು ರಾಜ್ಯದ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಸಿಎಂ ಸ್ಟಾಲಿನ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ತರಬೇತಿ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ತಮಿಳುನಾಡು ಪ್ರಮುಖ ರಾಜ್ಯವಾಗಿದೆ. ರಾಜ್ಯ ಸರ್ಕಾರವು ಕೈಗೊಂಡ ಕ್ರೀಡಾ ಅಭಿವೃದ್ಧಿ ಉಪಕ್ರಮಗಳಿಂದಾಗಿ ತಮಿಳುನಾಡಿನ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸತತವಾಗಿ ಗೆಲ್ಲುತ್ತಿದ್ದಾರೆ. ಮಣಿಪುರದ ಆಟಗಾರರನ್ನು ರಾಜ್ಯಕ್ಕೆ ಬರಮಾಡಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ.
ಗುಣಮಟ್ಟದ ತರಬೇತಿ ನೀಡಲು ಎಲ್ಲಾ ವ್ಯವಸ್ಥೆ:ಈ ನಿಟ್ಟಿನಲ್ಲಿ "ನಾನು (ಸಿಎಂ) ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇನೆ. ಈ ಕ್ರೀಡಾ ಪಟುಗಳು ಮತ್ತು ಮಹಿಳೆಯರಿಗೆ ತಮಿಳುನಾಡು ಸರ್ಕಾರದ ಕ್ರೀಡಾ ಅಭಿವೃದ್ಧಿ ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ತರಬೇತಿ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು" ಎಂದು ಕ್ರೀಡಾ ಸಚಿವರು ಭರವಸೆ ನೀಡಿದ್ದಾರೆ.