ಪಾಟ್ನಾ (ಬಿಹಾರ):ಬಿಹಾರದ ಆಡಳಿತಾರೂಢ ಜೆಡಿಯು ಮತ್ತು ಆರ್‌ಜೆಡಿ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರದರ್ಶಿಸುವ ಮತ್ತೊಂದು ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ತಮ್ಮದೇ ಪಕ್ಷದ ಇಬ್ಬರು ಸಚಿವರನ್ನು ಅಧಿಕೃತ ಸಭೆಗೆ ಆಹ್ವಾನಿಸಲಿಲ್ಲ ಎಂದು ವರದಿಯಾಗಿದೆ. ಮುಖ್ಯಮಂತ್ರಿಗಳು ಕೃಷಿ ಮತ್ತು ಸಹಕಾರ ಇಲಾಖೆ ಸಭೆ ಕರೆದಿದ್ದರು. ಆದರೆ, ಕೃಷಿ ಸಚಿವ ಕುಮಾರ್ ಸರ್ವಜೀತ್ ಮತ್ತು ಸಹಕಾರಿ ಸಚಿವ ಸುರೇಂದ್ರ ಪ್ರಸಾದ್ ಯಾದವ್ ಅವರನ್ನು ಸಭೆಗೆ ಆಹ್ವಾನಿಸಿರಲಿಲ್ಲ.
ನಿತೀಶ್ ಕುಮಾರ್ ಅವರು ನೇರವಾಗಿ ಸಹಕಾರ ಇಲಾಖೆ ಕಾರ್ಯದರ್ಶಿ ವಂದನಾ ಪ್ರೇಯಸಿ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿ ಎನ್.ಸರ್ವನ್ ಕುಮಾರ್ ಅವರಿಗೆ ತಮ್ಮ ನಿರ್ದೇಶನಗಳನ್ನು ಅನುಸರಿಸುವಂತೆ ಸೂಚಿಸಿದ್ದರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಬಿಜೆಪಿ ಕೋಟಾದಡಿ ನೇಮಕವಾದ ಸಚಿವರು ಇಂಥ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ಮಹಾಘಟ ಬಂಧನ್ ಸರ್ಕಾರದ ಅವಧಿಯಲ್ಲಿ, ತೇಜಸ್ವಿ ಯಾದವ್ ಅವರು ಯಾವಾಗಲೂ ಸಭೆಗಳಿಗೆ ಹಾಜರಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಅವರನ್ನು ಸಭೆಗೆ ಆಹ್ವಾನಿಸಲಾಗಿಲ್ಲ.
ಮುಖ್ಯಮಂತ್ರಿಗಳ ವಿರುದ್ಧ ಶಿಖಂಡಿ, ರಾತ್ರಿ ಕಾವಲುಗಾರ, ಭಿಕ್ಷುಕ ಮುಂತಾದ ಅಸಂಸದೀಯ ಪದಗಳನ್ನು ಬಳಸಿದ ಮಾಜಿ ಸಚಿವ ಸುಧಾಕರ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಿತೀಶ್ ಕುಮಾರ್ ಆರ್‌ಜೆಡಿ ಉನ್ನತ ನಾಯಕತ್ವದ ಬಗ್ಗೆ ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರ್‌ಜೆಡಿ ಪಕ್ಷದ ಶಾಸಕ ವಿಜಯ್ ಕುಮಾರ್ ಮಂಡಲ್ ಅವರು ನಿತೀಶ್ ಕುಮಾರ್ ಅವರ ಸಮಾಧಾನ್ ಯಾತ್ರೆಯನ್ನು ಟೀಕಿಸಿರುವ ಬಗ್ಗೆ ಕೂಡ ನಿತೀಶ್ ಅಸಮಾಧಾನಿತರಾಗಿದ್ದಾರೆ. ಅಲ್ಲದೆ, ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್ ಅವರು 'ರಾಮ ಚರಿತ್ ಮಾನಸ್' ವಿರುದ್ಧ ಕಮೆಂಟ್ ಮಾಡಿದ್ದು ಕೋಲಾಹಲ ಸೃಷ್ಟಿಸಿದೆ.