ಕೋಲ್ಕತ್ತಾ (ಪಶ್ಚಿಮಬಂಗಾಳ):ಟೀಂ ಇಂಡಿಯಾ ಸೋಲಿಗೆ ಅಪಶಕುನ (ಪನೌತಿ)ಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಹೀಯಾಳಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿಕ, ಇದೀಗ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸರದಿಯಾಗಿದೆ. 'ಪಾಪಿಗಳು' ಭಾಗಿಯಾಗಿದ್ದ ಪಂದ್ಯ ಬಿಟ್ಟು ಉಳಿದೆಲ್ಲಾ ಮ್ಯಾಚ್ಗಳಲ್ಲಿ ಭಾರತ ತಂಡ ಗೆದ್ದಿದೆ. ಅಹಮದಾಬಾದ್ ಬದಲಿಗೆ, ಈಡನ್ ಗಾರ್ಡನ್ಸ್ ಅಥವಾ ವಾಂಖೆಡೆಯಲ್ಲಿ ಪಂದ್ಯ ಆಯೋಜಿಸಿದ್ದರೆ ನಾವು ವಿಶ್ವಕಪ್ ಗೆಲ್ಲುತ್ತಿದ್ದೆವು ಎಂದು ಟೀಕಿಸಿದ್ದಾರೆ.
ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಪಾಪಿಗಳು (ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ) ಭಾಗವಹಿಸಿದ್ದ ಪಂದ್ಯವನ್ನು ಹೊರತುಪಡಿಸಿ ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಬಂದಿತ್ತು. ಆದರೆ, ಫೈನಲ್ನಲ್ಲಿ ಪಾಪಿಗಳು ಬಂದು ಕೂತಿದ್ದರಿಂದ ವಿಶ್ವಕಪ್ ಸೋತೆವು. ಫೈನಲ್ ಪಂದ್ಯ ಈಡನ್ ಗಾರ್ಡನ್ಸ್ ಅಥವಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದರೆ ಖಂಡಿತಾ ನಮ್ಮ ತಂಡ ಗೆಲುವು ಸಾಧಿಸುತ್ತಿತ್ತು ಎಂದಿದ್ದಾರೆ.
ಕೇಸರಿ ಜರ್ಸಿ ಬಗ್ಗೆ ಕ್ಯಾತೆ:ಟೀಂ ಇಂಡಿಯಾದ ಆಟಗಾರರಿಗೆ ಕೇಸರಿ ಬಣ್ಣದ ಜೆರ್ಸಿಯನ್ನು ನೀಡಿದ್ದನ್ನೂ ಟೀಕಿಸಿದ ಮಮತಾ, ಬಿಜೆಪಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡಾ ಸಂಸ್ಥೆಗಳನ್ನು ಕೇಸರೀಕರಣ ಮಾಡಲು ಹೊರಟಿದೆ. ದೇಶವನ್ನು ಪ್ರತಿನಿಧಿಸುವ ಆಟಗಾರರಿಗೆ ಕೇಸರಿ (ಬಿಜೆಪಿ ಪಕ್ಷದ ಬಣ್ಣ) ಬಣ್ಣದ ಉಡುಗೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಆಟಗಾರರು ಕೂಡ ತಮಗೆ ನೀಡಲಾದ ಕೇಸರಿ ಬಣ್ಣದ ಬಟ್ಟೆಯನ್ನು ವಿರೋಧಿಸಿದರು. ಪಂದ್ಯಗಳ ಸಮಯದಲ್ಲಿ ಅದನ್ನು ಅವರು ಧರಿಸುತ್ತಿರಲಿಲ್ಲ. ಪಂದ್ಯಗಳ ವೇಳೆ ನೀಲಿ ಬಣ್ಣದ ಜರ್ಸಿಗಳನ್ನು ಧರಿಸಿದರೆ ಅಭ್ಯಾಸದ ವೇಳೆ ಕೇಸರಿ ಬಣ್ಣದ ಜರ್ಸಿ ಧರಿಸಲಾಗುತ್ತಿತ್ತು. ಇದು ಬಿಜೆಪಿಯ ಕುತಂತ್ರ ಎಂದು ಆರೋಪಿಸಿದರು. ಟೀಮ್ ಇಂಡಿಯಾದ ಜರ್ಸಿಗಳು ಮೂಲದಲ್ಲಿ ನೀಲಿ ಬಣ್ಣದಿಂದ ಕೂಡಿದ್ದವು. ಅದನ್ನು ಬಿಜೆಪಿ ಕೇಸರಿಯಾಗಿ ಪರಿವರ್ತಿಸಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕ್ರೀಡೆಯನ್ನು ರಾಜಕೀಯಗೊಳಿಸುತ್ತಿದೆ. ಎಲ್ಲಾ ಫೆಡರೇಶನ್‌ಗಳನ್ನು ರಾಜಕೀಯ ಪಕ್ಷಗಳು ವಶಪಡಿಸಿಕೊಂಡಿವೆ. ಕ್ರಿಕೆಟ್, ಕಬಡ್ಡಿ ಎಲ್ಲೆಲ್ಲೂ ಕೇಸರಿ ರಾರಾಜಿಸುತ್ತದೆ. ಕೇಸರಿಯು 'ತ್ಯಾಗಿಗಳ' (ಸನ್ಯಾಸಿಗಳ) ಬಣ್ಣವಾಗಿದೆ. ಆದರೆ, ನೀವು (ಬಿಜೆಪಿ) ಭೋಗಿಗಳು ಎಂದು ಕರೆದಿದ್ದಾರೆ. ಕೇಸರಿ ಆರೋಪಕ್ಕೆ ನೆದರ್ಲ್ಯಾಂಡ್ ಕ್ರಿಕೆಟ್ ತಂಡದ ಉಡುಗೆಯೂ ಕೇಸರಿ ಬಣ್ಣವಲ್ಲದೇ ಎಂದು ಬಿಜೆಪಿ ತಿರುಗೇಟು ನೀಡಿದೆ.
ರಾಹುಲ್ ಪನೌತಿ ವಿವಾದ:ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ವಿಶ್ವಕಪ್ ಸೋತಿದ್ದನ್ನು ಪ್ರಸ್ತಾಪಿಸಿದ್ದರು. ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವತ್ತ ಸಾಗಿತ್ತು. ಆದರೆ, ಕೆಲ ಅಪಶಕುನಗಳು ಕ್ರೀಡಾಂಗಣಕ್ಕೆ ಬಂದ ಬಳಿಕ ಪಂದ್ಯ ಸೋಲುವಂತಾಯಿತು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಉದ್ದೇಶಿಸಿ ಟೀಕಿಸಿದ್ದರು. ಇದರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದಕ್ಕೆ ಉತ್ತರಿಸುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಇದನ್ನೂ ಓದಿ:'ಭಾರತ ವಿಶ್ವಕಪ್ ಗೆಲ್ಲುತ್ತಿತ್ತು, ಅಲ್ಲಿದ್ದ ಕೆಟ್ಟ ಶಕುನದಿಂದ ಸೋತಿತು': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ