ನವದೆಹಲಿ: ಪ್ರಸ್ತುತ ಸ್ಪೇನ್ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮ್ಯಾಡ್ರಿಡ್ನ ಉದ್ಯಾನವನದಲ್ಲಿ ಜಾಗಿಂಗ್ ಮಾಡುತ್ತಿರುವ ದೃಶ್ಯ ಗಮನಸೆಳೆದಿದೆ. ಸಿಎಂ ಮಮತಾ ಜಾಗಿಂಗ್ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. "ಉಲ್ಲಾಸದಾಯಕ ಬೆಳಗು. ಉತ್ತಮ ಜಾಗಿಂಗ್ ದಿನದ ಮುಂದಿನ ಕೆಲಸಗಳಿಗಾಗಿ ನಿಮ್ಮನ್ನು ಶಕ್ತಿಯುತಗೊಳಿಸುತ್ತದೆ. ಸದೃಢರಾಗಿರಿ, ಎಲ್ಲರೂ ಆರೋಗ್ಯವಾಗಿರಿ!" ಎಂದು ವೀಡಿಯೊಗೆ ಅವರು ಕ್ಯಾಪ್ಷನ್ ನೀಡಿದ್ದಾರೆ. ಇದೇ ವೀಡಿಯೊವನ್ನು ತೃಣಮೂಲ ಕಾಂಗ್ರೆಸ್ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಮೂರು ದಿನಗಳ ವ್ಯಾಪಾರ ಶೃಂಗಸಭೆಯಲ್ಲಿ ಭಾಗವಹಿಸಲು ಬ್ಯಾನರ್ಜಿ ಮಂಗಳವಾರ ಸ್ಪೇನ್ಗೆ ಬಂದಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಸಿಎಂ ಇದೇ ಸಂದರ್ಭದಲ್ಲಿ ಭೇಟಿಯಾದರು. ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ಬ್ಯಾನರ್ಜಿ ಅವರೊಂದಿಗೆ ಗಂಗೂಲಿ ಕುಳಿತಿರುವ ಫೋಟೋವನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಹಂಚಿಕೊಂಡಿದೆ.
ಭಾರತ ಮತ್ತು ಸ್ಪೇನ್ ನಡುವಿನ ಪರಸ್ಪರ ಸಹಯೋಗದ ಮೂಲಕ ಫುಟ್ಬಾಲ್ ಆಟಕ್ಕೆ ಉತ್ತೇಜನ ನೀಡಲು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಲಿಗಾ ನ್ಯಾಸಿಯೋನಲ್ ಡಿ ಫುಟ್ಬೋಲ್ ಪ್ರೊಫೆಷನಲ್ (ಲಾಲಿಗಾ) ತಿಳುವಳಿಕಾ ಒಡಂಬಡಿಕೆಯನ್ನು ಮಾಡಿಕೊಂಡಿವೆ ಎಂದು ಟಿಎಂಸಿ ಹೇಳಿದೆ. "ಬಂಗಾಳವು ಫುಟ್ಬಾಲ್ನ ಮೆಕ್ಕಾ ಆಗಿದೆ ಮತ್ತು ಈ ಸುಂದರವಾದ ಕ್ರೀಡೆಗಾಗಿ ಪ್ರತಿಯೊಬ್ಬ ಬಂಗಾಳಿಯಲ್ಲೂ ಭಾವನೆಗಳು ಆಳವಾಗಿ ಬೇರೂರಿವೆ. ಇಂದು, ಗೌರವಾನ್ವಿತ ಸಿಎಂ @MamataOfficial ನಮ್ಮ ರಾಜ್ಯದಲ್ಲಿ ಸುಂದರವಾದ ಆಟವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹೂಡಿಕೆಯ ಸಾಧ್ಯತೆಗಳನ್ನು ಅನ್ವೇಷಿಸಲು ಲಾ ಲಿಗಾ ಅಧಿಕಾರಿಗಳೊಂದಿಗೆ ಫಲಪ್ರದ ಸಭೆ ನಡೆಸಿದರು" ಎಂದು ಎಐಟಿಸಿ ಮತ್ತೊಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.