ನವದೆಹಲಿ:ಅಪರೂಪದಲ್ಲಿ ಅಪರೂಪ ಕಾಯಿಲೆಯಿಂದ ಬಳಲುತ್ತಿರುವ ದೆಹಲಿಯ ಬಾಲಕನನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಆನುವಂಶಿಕ ಕಾಯಿಲೆಯಾದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್‌ಎಂಎ) ಚಿಕಿತ್ಸೆಗೆ ತುತ್ತಾಗಿದ್ದು, ಅಮೆರಿಕದಿಂದ ಇಂಜೆಕ್ಷನ್ ತರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದಕ್ಕೆ 17.50 ಕೋಟಿ ರೂಪಾಯಿ ಖರ್ಚಾಗಿದೆ.
ಎಸ್‌ಎಂಎ ಕಾಯಿಲೆಯು ಅಪಾಯಕಾರಿಯಾಗಿದ್ದು, ಅದು ತೀರಾ ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದರೆ ಪ್ರಾಣಕ್ಕೆ ಕುತ್ತು ತರಲಿದೆ. ಇಂತಹ ರೋಗ ಪುಟ್ಟ ಬಾಲಕನಲ್ಲಿ ಕಂಡು ಬಂದಿತ್ತು. ಕುಟುಂಬಸ್ಥರು ನೆರವು ಕೋರಿ ಪಂಜಾಬ್ ಎಎಪಿ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಅವರಲ್ಲಿ ಮನವಿ ಮಾಡಿದ್ದರು. ಜನರು ಕೂಡ ನೆರವು ನೀಡಿದ್ದು, ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಅಪರೂಪದ ಕಾಯಿಲೆಗೆ ಮಗು ತುತ್ತಾಗಿರುವ ವಿಷಯ ತಿಳಿದ ಸಿಎಂ ಕೇಜ್ರಿವಾಲ್ ಅವರು ಕುಟುಂಬದೊಂದಿಗೆ ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಗಂಭೀರ ಕಾಯಿಲೆಯಿಂದಾಗಿ ಮಗು ಕೈ- ಕಾಲುಗಳಲ್ಲಿ ಶಕ್ತಿಯನ್ನು ಕಳೆದುಕೊಂಡಿದೆ. 24 ತಿಂಗಳೊಳಗೆ ರೋಗಕ್ಕೆ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ ಎಂದು ವೈದ್ಯರು ಸೂಚಿಸಿದ್ದರು. ಚಿಕಿತ್ಸೆಗೆ ದೊಡ್ಡ ಮೊತ್ತ ಬೇಕಾಗುವ ಕಾರಣ ಸಾರ್ವಜನಿಕರಲ್ಲಿ ಪೋಷಕರು ಸಹಾಯಕ್ಕಾಗಿ ಮನವಿ ಮಾಡಿದ್ದರು.
ನೆರವು ನೀಡಿದ ಜನರು:ಕಾಯಿಲೆ ಪೀಡಿತ ಮಗುವಿಗೆ ದೇಶದಲ್ಲಿ ಯಾವುದೇ ಚಿಕಿತ್ಸಾ ಔಷಧ ಇಲ್ಲ. ರೋಗಕ್ಕೆ ನೀಡಲಾಗುವ ಚುಚ್ಚುಮದ್ದು ಅಮೆರಿಕದಿಂದಲೇ ತರಿಸಬೇಕು. ಇದಕ್ಕೆ 17.5 ಕೋಟಿ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಸರ್ಕಾರ ನೆರವು ನೀಡಬೇಕು ಎಂದು ಪೋಷಕರು ಕೋರಿದ್ದರು. ಪಂಜಾಬ್‌ನ ಎಎಪಿ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಮತ್ತು ಸ್ಥಳೀಯ ಶಾಸಕ ಗುಲಾಬ್ ಸಿಂಗ್ ಅವರು ಮಗುವಿನ ಸಹಾಯಕ್ಕೆ ಧಾವಿಸಿದ್ದರು.