ಹೈದರಾಬಾದ್(ತೆಲಂಗಾಣ): ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವಾದ ಇಂದು 125 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅನಾವರಣಗೊಳಿಸಲಿದ್ದಾರೆ. ಇದನ್ನು ನಗರದ ಹೃದಯ ಭಾಗದಲ್ಲಿರುವ ಹುಸೇನ್ ಸಾಗರ್ ಸರೋವರದ ಬಳಿ ಸ್ಥಾಪಿಸಲಾಗಿದೆ. ಸಿಎಂ ಕೆಸಿಆರ್ ಅವರು ಇತ್ತೀಚೆಗೆ ಬೃಹತ್ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ, ನೂತನ ಸೆಕ್ರೆಟರಿಯೇಟ್ ಕಟ್ಟಡ ಸಂಕೀರ್ಣ ಉದ್ಘಾಟನೆ ಮತ್ತಿತರ ವಿಷಯಗಳ ಕುರಿತು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
"ಪ್ರತಿಮೆ ಅನಾವರಣದ ನಿಮಿತ್ತ ಬೃಹತ್ ಕ್ರೇನ್ ಬಳಸಿ ಮೂರ್ತಿಯ ಮೇಲಿನ ಪರದೆ ತೆಗೆದು ಗುಲಾಬಿ, ಬಿಳಿ ಸೇವಂತಿಗೆ ಹಾಗೂ ವೀಳ್ಯದೆಲೆಯಿಂದ ಮಾಡಿದ ಮಾಲೆಯನ್ನು ಹಾಕಲಾಗುವುದು. ಬಳಿಕ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲು ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಗುವುದು. ಸಮಾರಂಭವನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲು ಬೌದ್ಧ ಸನ್ಯಾಸಿಗಳನ್ನು ಆಹ್ವಾನಿಸಲಾಗುತ್ತದೆ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರನ್ನು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ.
ಜನರಿಗೆ ಸ್ಫೂರ್ತಿ-ಕೆಸಿಆರ್: ತೆಲಂಗಾಣ ಹುತಾತ್ಮರ ಸ್ಮಾರಕ ಹಾಗೂ ರಾಜ್ಯ ಸಚಿವಾಲಯದ ಪಕ್ಕದಲ್ಲಿರುವ ಬುದ್ಧನ ಪ್ರತಿಮೆಯ ಪಕ್ಕದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆ ಜನರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಇಡೀ ರಾಜ್ಯ ಆಡಳಿತಕ್ಕೆ ಪ್ರೇರಣೆ ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಬೇಕು ಮತ್ತು ಇಡೀ ತೆಲಂಗಾಣ ಜನತೆ ಮತ್ತು ದೇಶ ಈ ಸಂದರ್ಭವನ್ನು ನೆನಪಿಡುವಂತೆ ಆಚರಿಸಬೇಕು ಎಂದು ಅವರು ಸಚಿವರು ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಂಬೇಡ್ಕರ್ ಅವರು ಸಾಮಾಜಿಕ - ಆರ್ಥಿಕ ನ್ಯಾಯವನ್ನು ಒದಗಿಸಿದ್ದಾರೆ ಮತ್ತು ಅವರ ದೂರದೃಷ್ಟಿಯೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ನ್ಯಾಯವನ್ನು ತಂದಿದ್ದಾರೆ. ತೆಲಂಗಾಣ ರಚನೆಗೆ ನಾಂದಿ ಹಾಡಿದ ಪ್ರತ್ಯೇಕ ರಾಜ್ಯಗಳಿಗಾಗಿ ಭಾರತೀಯ ಸಂವಿಧಾನದಲ್ಲಿ 3 ನೇ ಪರಿಚ್ಛೇದವನ್ನು ಅಳವಡಿಸಿದವರು ಡಾ.ಅಂಬೇಡ್ಕರ್ ಎಂದು ಕೆಸಿಆರ್ ಶ್ಲಾಘಿಸಿದರು. ಅನಾವರಣ ಸಮಾರಂಭದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಕೆಸಿಆರ್, ಪ್ರಕಾಶ್ ಅಂಬೇಡ್ಕರ್ ಮತ್ತು ರಾಜ್ಯ ಕಲ್ಯಾಣ ಸಚಿವ ಕೊಪ್ಪುಳ ಈಶ್ವರ್ ಮಾತನಾಡಲಿದ್ದಾರೆ.