ಹೈದರಾಬಾದ್:ಸಣ್ಣ ವಯಸ್ಸಿನಲ್ಲೇ ಚೆಸ್ ಆಟದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ತೆಲಂಗಾಣ ಚೆಸ್ ಆಟಗಾರ ಉಪ್ಪಳ ಪ್ರಣೀತ್ (16)ಗೆ ವಿಶ್ವ ಚೆಸ್ ಫೆಡರೇಷನ್ 'ಗ್ರ್ಯಾಂಡ್ ಮಾಸ್ಟರ್' ಪ್ರಶಸ್ತಿ ಘೋಷಿಸಿದೆ. ಇದಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಣೀತ್ ಹಾಗೂ ಪೋಷಕರನ್ನು ಸಿಎಂ ಕೆಸಿಆರ್ ಸೋಮವಾರ ಸೆಕ್ರೆಟರಿಯೇಟ್‌ಗೆ ಆಹ್ವಾನಿಸಿದರು. ಭವಿಷ್ಯದಲ್ಲಿ ಚೆಸ್‌ನಲ್ಲಿ 'ಸೂಪರ್ ಗ್ರ್ಯಾಂಡ್ ಮಾಸ್ಟರ್' ಆಗಲು ಪ್ರಣೀತ್‌ಗೆ ಅಗತ್ಯವಿರುವ ತರಬೇತಿ ಮತ್ತು ಇತರ ವೆಚ್ಚಗಳಿಗಾಗಿ ಸಿಎಂ 2.5 ಕೋಟಿ ರೂ.ಗಳನ್ನು ಘೋಷಿಸಿದರು. ಅಲ್ಲದೇ ಪ್ರಣೀತ್‌ಗೆ ಅಗತ್ಯ ತರಬೇತಿ ನೀಡಿದ್ದಕ್ಕಾಗಿ ಪೋಷಕರನ್ನು ಶ್ಲಾಘಿಸಿದರು.
ಸಿಎಂ ಅಭಿನಂದನೆ:"ಪ್ರಣೀತ್‌ಗೆ ಚೆಸ್ ಮೇಲಿನ ಒಲವು ಮತ್ತು ಕಠಿಣ ಪರಿಶ್ರಮವೇ ಅವರನ್ನು ಗ್ರ್ಯಾಂಡ್ ಮಾಸ್ಟರ್ ಆಗುವಂತೆ ಮಾಡಿದೆ. ಗ್ರ್ಯಾಂಡ್ ಮಾಸ್ಟರ್ ಅವರ ವೃತ್ತಿಜೀವನ ಇನ್ನೂ ಎತ್ತರಕ್ಕೆ ಏರಲಿ. ಭವಿಷ್ಯದಲ್ಲಿ ಪ್ರಣೀತ್ ತೆಲಂಗಾಣ ಮತ್ತು ಭಾರತಕ್ಕೆ ದೊಡ್ಡ ಹೆಸರು ಮತ್ತು ಕೀರ್ತಿ ತರಲಿ" ಎಂದು ಸಿಎಂ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಣೀತ್ ಪೋಷಕರು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ರಾಜ್ಯ ಸರ್ಕಾರ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಫಲ ನೀಡುತ್ತಿವೆ ಎಂಬುದಕ್ಕೆ ಪ್ರಣೀತ್ ಗ್ರ್ಯಾಂಡ್ ಮಾಸ್ಟರ್ ಆಗಿರುವುದು ಸಾಕ್ಷಿಯಾಗಿದೆ ಎಂದು ಸಿಎಂ ಕೆಸಿಆರ್ ಹೇಳಿದರು. ಗ್ರ್ಯಾಂಡ್ ಮಾಸ್ಟರ್ ಆಗಿರುವ ಪ್ರಣೀತ್ ಅವರನ್ನು ರಾಜ್ಯ ಕ್ರೀಡಾ ಸಚಿವ ಶ್ರೀನಿವಾಸ್ ಗೌಡ್ ಕೂಡ ಅಭಿನಂದಿಸಿದ್ದಾರೆ.