ಹೈದರಾಬಾದ್(ತೆಲಂಗಾಣ): ತೆಲಂಗಾಣದಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಬಜೆಟ್ ಮಂಡನೆ ವೇಳೆ ರೈತರಿಗೆ ಭರ್ಜರಿ ಉಡುಗೊರೆ ನೀಡಿದ್ದ ಮುಖ್ಯಮಂತ್ರಿ ಕೆಸಿಆರ್ ಇದೀಗ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಅಧಿವೇಶನದಲ್ಲೇ ಸರ್ಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಸಿಎಂ ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಕೆಸಿಆರ್, ರಾಜ್ಯಾದ್ಯಂತ 91,142 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಈ ಪೈಕಿ 80,039 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದರು. ಉಳಿದ 11,103 ಹುದ್ದೆಗಳಿಗೆ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಾಗುವುದು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ.
ಇದನ್ನೂ ಓದಿರಿ:₹50 ಸಾವಿರಕ್ಕಿಂತ ಕಡಿಮೆ ಇರುವ ರೈತರ ಸಾಲ ಮನ್ನಾ: ಕೆಸಿಆರ್ ಸರ್ಕಾರದ ಘೋಷಣೆ
ಶೇ. 95ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಕೆಲಸ ನೀಡಲು ನಿರ್ಧರಿಸಲಾಗಿದೆ ಎಂದಿರುವ ಸಿಎಂ, ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಹೆಚ್ಚಿಸಲಾಗಿದೆ ಎಂದರು. ಇತರ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 44 ವರ್ಷ, ಎಸ್ಸಿ, ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ವಯೋಮಿತಿ 49 ವರ್ಷಕ್ಕೆ ಏರಿಕೆ ಮಾಡಲಗಿದೆ ಎಂದಿರುವ ಸಿಎಂ, ದಿವ್ಯಾಂಗ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 54ಕ್ಕೆ ಏರಿಕೆ ಮಾಡಲಾಗಿದೆ ಎಂದರು.
50 ಸಾವಿರ ರೂವರೆಗೆ ಸಾಲ ಮನ್ನಾ:ರಾಜ್ಯದ ರೈತರು ಮಾಡಿರುವ 50 ಸಾವಿರ ರೂಗಿಂತಲೂ ಕಡಿಮೆ ಸಾಲ ಮನ್ನಾ ಮಾಡಲಾಗುವುದು. 2022-23ರಲ್ಲಿ ಬೆಳೆ ಸಾಲಕ್ಕಾಗಿ 16,144 ಕೋಟಿ ರೂ. ಮೀಸಲಿಡಲಾಗಿದ್ದು, ಒಟ್ಟು 5.12 ಲಕ್ಷ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು. ಜೊತೆಗೆ ಮುಂದಿನ ಆರ್ಥಿಕ ವರ್ಷದಲ್ಲಿ 75 ಸಾವಿರ ರೂ.ಗಿಂತಲೂ ಕಡಿಮೆ ಸಾಲ ಹೊಂದಿರುವವರ ಸಾಲ ಮನ್ನಾ ಮಾಡುವುದಾಗಿ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಹರೀಶ್ ರಾವ್ ತಿಳಿಸಿದ್ದಾರೆ.