ಗುವಾಹಟಿ: ನಿನ್ನೆ ಬೆಂಗಳೂರಿನಲ್ಲಿ ನಡೆದ 26 ವಿರೋಧ ಪಕ್ಷಗಳ ಮಹಾಮೈತ್ರಿ ಸಭೆಯಲ್ಲಿ ಈ ಮಹಾಘಟಬಂಧನ್ಗೆ I.N.D.I.A ಎಂದು ಹೆಸರು ಘೋಷಣೆ ಮಾಡುತ್ತಿದ್ದಂತೆ ಅಸ್ಸೋಂ ಮುಖ್ಯಮಂತ್ರಿ ಡಾ ಹಿಮಂತ ಬಿಸ್ವಾ ಶರ್ಮಾ ಅವರು ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಒಗ್ಗಟ್ಟಿನ ತಂತ್ರಗಾರಿಕೆ ಆಡಳಿತಾರೂಢ ಬಿಜೆಪಿಗೆ ನಡುಕ ಹುಟ್ಟಿಸಿದಂತಿದೆ. ಈ ಅಲೆ ಅಸ್ಸೋಂನ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರನ್ನೂ ತಟ್ಟಿದಂತಿದೆ. ಮೈತ್ರಿಯ ಹೆಸರು ಇಂಡಿಯಾ ಘೋಷಣೆಯಾದ ನಂತರ, ಮುಖ್ಯಮಂತ್ರಿ ಹಿಮಂತ ವಿಸ್ವಾ ಶರ್ಮಾ ಅವರು ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಗಳ ಬಯೋದಲ್ಲಿ ಇದ್ದ ಪದವನ್ನು ಗಮನಾರ್ಹವಾಗಿ 'ಭಾರತ್' ಎಂದು ಬದಲಾಯಿಸಿಕೊಂಡಿದ್ದಾರೆ.
ಆಶ್ಚರ್ಯವೆಂದರೆ ಅಸ್ಸೋಂ ಮುಖ್ಯಮಂತ್ರಿ ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ತಮ್ಮ ಸ್ವಯಂ ಗುರುತನ್ನು ವಿವರಿಸಲು ದೇಶದ ಹೆಸರು ಭಾರತ್ ಪದವನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಹಿಂದೆ ಇದ್ದ ಇಂಡಿಯಾ ಪದವನ್ನು ತೆಗೆದುಹಾಕಿದ್ದಾರೆ. ಈ ಹಿಂದೆ ಬಯೋದಲ್ಲಿ ಚೀಫ್ ಮಿನಿಸ್ಟರ್ ಆಫ್ ಅಸ್ಸೋಂ, ಇಂಡಿಯಾ ಎಂದು ಬರೆದುಕೊಂಡಿದ್ದರು. ಮಹಾಘಟಬಂಧನ್ಗೆ ವಿಪಕ್ಷಗಳು ಒಮ್ಮತದಿಂದ I.N.D.I.A ಎಂದು ಹೆಸರು ಘೋಷಣೆ ಮಾಡುತ್ತಿದ್ದಂತೆ, ತಮ್ಮ ಬಯೋದಲ್ಲಿದ್ದ ಇಂಡಿಯಾ ಪದವನ್ನು ತೆಗೆದು ಭಾರತ್ ಎಂದು ಬದಲಾಯಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ರಾಜಕೀಯ ವಿಶ್ಲೇಷಕರು ಇದನ್ನು ವಿರೋಧ ಪಕ್ಷದ ಇತ್ತೀಚಿನ ನಡೆಗೆ ಸಾಂಕೇತಿಕ ಪ್ರತಿಕ್ರಿಯೆ ಎಂದು ಹೇಳುತ್ತಿದ್ದಾರೆ.
ಪಾಟ್ನಾದಲ್ಲಿ ನಡೆಸಿದ ಮೊದಲ ವಿಪಕ್ಷಗಳ ಮಹಾಮೈತ್ರಿ ಸಭೆಯ ನಂತರ ದೇಶದ 26 ವಿರೋಧ ಪಕ್ಷಗಳ ನಾಯಕರುಗಳು ಬೇರೆ ಬೇರೆ ರಾಜ್ಯಗಳಿಂದ ನಿನ್ನೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಮಹಾಮೈತ್ರಿ ಸಭೆ ಮಹಾಘಟಬಂಧನ್ ಸಭೆ ನಡೆಸಿದ್ದವು. ಈ ಸಭೆ ದೇಶದ ರಾಜಕೀಯವನ್ನೇ ಅಲ್ಲಾಡಿಸಿತ್ತು. ಪಾಟ್ನಾದಲ್ಲಿ ನಡೆದ ಮೊದಲ ಸಭೆಯಲ್ಲಿ, ಈಗ ಮೈತ್ರಿಯಲ್ಲಿ ಕಾಂಗ್ರೆಸ್ ಮಾತ್ರವಲ್ಲದೇ ಹಲವು ಪಕ್ಷಗಳು ಇರುವುದರಿಂದ, ಮೈತ್ರಿ ಇತರ ಪಕ್ಷಗಳು ಈ ಹಿಂದೆ ಇದ್ದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಹೆಸರನ್ನು ಬದಲಾಯಿಸುವುವಂತೆ ಒತ್ತಾಯಿಸಿದ್ದವು.