ಡೆಹ್ರಾಡೂನ್ (ಉತ್ತರಾಖಂಡ):ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದರು.
ಮದುವೆ, ವಿಚ್ಛೇದನ, ಆಸ್ತಿ, ಉತ್ತರಾಧಿಕಾರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲರಿಗೂ ಒಂದೇ ರೀತಿಯ ಕಾನೂನು ಜಾರಿಗೆ ತರಲು ಏಕರೂಪ ನಾಗರಿಕ ಸಂಹಿತೆಯ ಕರಡು ತಯಾರಿಸಲು ಸಮಿತಿಯನ್ನು ರಚಿಸಲಾಗುವುದು. ಈ ಏಕರೂಪ ನಾಗರಿಕ ಸಂಹಿತೆಯು ನಮ್ಮ ಸಂವಿಧಾನವನ್ನು ರೂಪಿಸಿದವರ ಕನಸುಗಳನ್ನು ನನಸಾಗಿಸುವ ಮತ್ತು ಸಂವಿಧಾನದ ಚೈತನ್ಯ ಗಟ್ಟಿಗೊಳಿಸುವತ್ತ ಒಂದು ಪರಿಣಾಮಕಾರಿ ಹೆಜ್ಜೆಯಾಗಿದೆ ಎಂದು ಸಿಎಂ ಧಾಮಿ ಹೇಳಿದರು.
ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಇನ್ನೆರಡೇ ದಿನಗಳು ಬಾಕಿಯಿರುವ ಹಾಗೂ ಕರ್ನಾಟಕದಲ್ಲಿ ಹಿಜಾಬ್ ವಿವಾದ ಉಲ್ಬಣಗೊಳ್ಳುತ್ತಿರುವ ಈ ವೇಳೆಯಲ್ಲಿ ಪುಷ್ಕರ್ ಸಿಂಗ್ ಏಕರೂಪ ನಾಗರಿಕ ಸಂಹಿತೆಯ ಭರವಸೆ ನೀಡಿದ್ದಾರೆ. ಚುನಾವಣೆ ನಂತರ ದೇವಭೂಮಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಉತ್ತರಾಖಂಡ ಸಿಎಂ ಭರವಸೆಯನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಬಿಜೆಪಿ ಸಮಾನತೆ ಮತ್ತು ಸಬಲೀಕರಣದ ಕಡೆಗೆ ಗಮನ ಹರಿಸುತ್ತದೆ ಎಂದು ಹೇಳಿದ್ದಾರೆ.