ಐಜ್ವಾಲ್:ಮಿಜೋರಾಂ ಮುಖ್ಯಮಂತ್ರಿಯ ಪುತ್ರಿ ಮಿಲಾರಿ ಚಾಂಗ್ಟೆ ಅವರು ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಶನಿವಾರ ವರದಿಯಾಗಿದೆ. ಮಗಳ ದುರ್ವರ್ತನೆಯ ಮಾಹಿತಿ ಪಡೆದ ಮುಖ್ಯಮಂತ್ರಿ ಝೋರಮ್‌ತಂಗಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಇತ್ತೀಚೆಗೆ ಕ್ಲಿನಿಕ್‌ನಲ್ಲಿ ಚರ್ಮರೋಗ ವೈದ್ಯರ ಮೇಲೆ ಮಿಲಾರಿ ಚಾಂಗ್ಟೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಖಂಡಿಸಿ 800ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದರು. ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮಿಜೋರಾಂ ವಿಭಾಗದ ವೈದ್ಯರು ಕೂಡಾ ಘಟನೆಯನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದರು.