ಇಂಫಾಲ್:''ಮಣಿಪುರದ ಪ್ರಸ್ತುತ ಬಿಕ್ಕಟ್ಟು ಜನಾಂಗೀಯ ಗುಂಪುಗಳ ನಡುವಿನ ಘರ್ಷಣೆಯಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೂ ಅಲ್ಲ. ಇದಕ್ಕೆ ನೆರೆಯ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಕುಕಿ ಉಗ್ರಗಾಮಿ ಗುಂಪುಗಳ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯೇ ಕಾರಣ'' ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಗಂಭೀರ ಆರೋಪ ಮಾಡಿದರು.
''ಅವರು ರಾಜ್ಯವನ್ನು ಒಡೆಯಲು ಬಯಸುತ್ತಿದ್ದಾರೆ. ರಾಜ್ಯವನ್ನು ವಿಘಟನೆ ಮಾಡಲು ಬಯಸುವ ಜನರ ಗುಂಪಿನಿಂದ ಅಶಾಂತಿ ಉಂಟಾಗಿದೆ. ಆದರೆ, ಈ ಬಿಕ್ಕಟ್ಟನ್ನು ಜನಾಂಗೀಯ, ಕೋಮುವಾದ, ಧಾರ್ಮಿಕ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಗುಂಪುಗಳ ನಡುವಿನ ಘರ್ಷಣೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಜನರ ಧ್ವನಿಯಿಂದ ಸಂಘರ್ಷಕ್ಕೆ ನಿಜವಾದ ಕಾರಣವೇನು ಎಂಬುದು ಹೊರಬಿದ್ದಿದೆ'' ಎಂದು ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧ: ''ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ನೀಡಿದ ಹೇಳಿಕೆಗಳು ಮತ್ತು ಮುಖ್ಯವಾಗಿ ಆರೋಪಿಗಳ ಬಂಧನದ ಕುರಿತು ಕೇಂದ್ರ ತನಿಖಾ ಸಂಸ್ಥೆಯ ಹೇಳಿಕೆಗಳನ್ನು ಒತ್ತಿ ಹೇಳಿದ ಮುಖ್ಯಮಂತ್ರಿ, ಮಣಿಪುರದ ಬಿಕ್ಕಟ್ಟಿನ ಹಿಂದಿನ ಸ್ಪಷ್ಟ ಕಾರಣಗಳ ಬಗ್ಗೆ ಮಾತನಾಡಿದರು. "ಈ ವಿಷಯವು ಭಾರತೀಯ ಒಕ್ಕೂಟದ ವಿರುದ್ಧದ ಯುದ್ಧವಾಗಿರುವುದರಿಂದ, ಅದನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದರು.