ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢದಲ್ಲಿ ನಕ್ಸಲ್​ ದಾಳಿ: ಹುತಾತ್ಮ ಜವಾನರಿಗೆ ಗೌರವ ನಮನ ಸಲ್ಲಿಸಿದ ಸಿಎಂ ಭೂಪೇಶ್​ ಬಘೇಲ್​ - ಅರನ್‌ಪುರದಲ್ಲಿ ಐಇಡಿ ಸ್ಫೋಟ

ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬೇಕಿದ್ದ ಛತ್ತೀಸ್​ಗಢ ಸಿಎಂ ಭೂಪೇಶ್​ ಬಘೇಲ್​ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.

CM Bhupesh Baghel paid tribute to the martyred soldiers
ಹುತಾತ್ಮ ಜವಾನರಿಗೆ ಗೌರವ ನಮನ ಸಲ್ಲಿಸಿದ ಸಿಎಂ ಭೂಪೇಶ್​ ಬಘೇಲ್​

By

Published : Apr 27, 2023, 1:53 PM IST

ರಾಯ​ಪುರ್​ (ಛತ್ತೀಸ್​ಗಢ): ದಾಂತೇವಾಡ ಜಿಲ್ಲೆಯ ಅರನ್​ಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಹುತಾತ್ಮರಾದ ಹತ್ತು ಜನ ಪೊಲೀಸರಿಗೆ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್​ ಇಂದು ಗೌರವ ನಮನ ಸಲ್ಲಿಸಿದರು. ಇದೇ ವೇಳೆ, ಹುತಾತ್ಮರ ಕುಟುಂಬ ಸದಸ್ಯರನ್ನೂ ಭೇಟಿ ಮಾಡಿ ಸಾಂತ್ವನ ಹೇಳಿದರು.

ದಾಂತೇವಾಡದ ಕಾರ್ಲಿ ಪೊಲೀಸ್​ ಲೈನ್​ನಲ್ಲಿ ಹುತಾತ್ಮರಾದ ಹತ್ತು ಜನ ಪೊಲೀಸರ ಮೃತದೇಹಗಳನ್ನು ಅಂತಿಮ ನಮನಕ್ಕೆ ಇಡಲಾಗಿದ್ದು, ಮುಖ್ಯಮಂತ್ರಿ ಭೂಪೇಶ್​ ಬಘೇಲ್​ ಅವರ ಜೊತೆಗೆ ರಾಜ್ಯದ ಗೃಹ ಸಚಿವ ತಾಮಧ್ವಜ್​ ಸಾಹು, ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗಲಿದ ಭದ್ರತಾ ಸಿಬ್ಬಂದಿಗೆ ಅಂತಿಮವಾಗಿ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್​ ಬಘೇಲ್​, "ಪೊಲೀಸ್​ ಸಿಬ್ಬಂದಿಯ ಸಾವು ವ್ಯರ್ಥವಾಗುವುದಿಲ್ಲ. ನಮ್ಮ ಭದ್ರತಾ ಪಡೆಗಳು ಮಾವೋವಾದಿಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಎದುರಿಸಲಿವೆ. ಎಡಪಂಥೀಯ ಉಗ್ರಗಾಮಿಗಳ ವಿರುದ್ಧದ ಹೋರಾಟವು ಈ ಪ್ರದೇಶದಲ್ಲಿ ಅಂತಿಮ ಹಂತದಲ್ಲಿದೆ" ಎಂದು ಹೇಳಿದರು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್​ ಬಘೇಲ್​ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಭೇಟಿ ನೀಡಬೇಕಿತ್ತು. ಆದರೆ ಈ ಘಟನೆಯ ಕಾರಣದಿಂದ ಸಿಎಂ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಬುಧವಾರ ಅರನ್‌ಪುರದಲ್ಲಿ ಐಇಡಿ ಸ್ಫೋಟದಿಂದ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದಾಂತೇವಾಡ ಜಿಲ್ಲಾ ಮೀಸಲು ಗಾರ್ಡ್‌ಗಳ (ಡಿಆರ್‌ಜಿ) 10 ಸಿಬ್ಬಂದಿ ಮತ್ತು ಚಾಲಕ ಸೇರಿ 11 ಮಂದಿ ಸಾವನ್ನಪ್ಪಿದ್ದರು. ಸ್ಫೋಟದ ರಭಸಕ್ಡಕೆ ವಾಹನ ಗಾಳಿಯಲ್ಲಿ ಎತ್ತರಕ್ಕೆ ಹಾರಲ್ಪಟ್ಟು, ರಸ್ತೆಯ ಮೇಲೆ 8 ಅಡಿ ಆಳ ಮತ್ತು 12 ಅಡಿ ಅಗಲದ ಹೊಂಡ ನಿರ್ಮಾಣವಾಗಿದೆ. ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನ ಸಂಪೂರ್ಣ ಧ್ವಂಸಗೊಂಡಿದೆ. ಸಮೇಲಿ ಮತ್ತು ಅರನ್‌ಪುರ್‌ಗೆ ಸಮೀಪ ಮಾವೋವಾದಿಗಳ ಉಪಸ್ಥಿತಿಯ ಸುಳಿವು ಮೇರೆಗೆ, ಡಿಆರ್‌ಜಿಯ ಪ್ರಬಲ ತಂಡವು ಮೂರು ದಿನಗಳ ಹಿಂದೆ ಈ ಪ್ರದೇಶದಲ್ಲಿ ಮಾವೋವಾದಿ ವಿರೋಧಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು. ಅರನ್‌ಪುರದಿಂದ ಖಾಸಗಿ ವಾಹನದಲ್ಲಿ ದಾಂತೇವಾಡಕ್ಕೆ ಹಿಂದಿರುಗುತ್ತಿದ್ದ ವೇಳೆ ಮಾವೋವಾದಿಗಳು ದಾಳಿ ನಡೆಸಿದ್ದಾರೆ.

10 ಪೊಲೀಸ್​ ಸಿಬ್ಬಂದಿ ಹಾಗೂ ಒಬ್ಬ ಚಾಲಕನನ್ನು ಬಲಿ ತೆಗೆದುಕೊಂಡ ದಾಳಿ ನಡೆದ ಬೆನ್ನಲ್ಲೆ ಮುಖ್ಯಮಂತ್ರಿ ಉನ್ನತಮಟ್ಟದ ಸಭೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಭೆಯಲ್ಲಿ ನಕ್ಸಲಿಸಂ ತೊಡೆದುಹಾಕಲು ಸಮಗ್ರ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ಬಹಿರಂಗವಾಗಿದೆ. ಗೃಹ ಸಚಿವ ತಾಮ್ರಧ್ವಜ್ ಸಾಹು, ಮುಖ್ಯ ಕಾರ್ಯದರ್ಶಿ ಅಮಿತಾಭ್ ಜೈನ್, ಪೊಲೀಸ್ ಮಹಾನಿರ್ದೇಶಕ ಅಶೋಕ್ ಜುನೇಜಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಅಂಕಿತ್ ಆನಂದ್, ಪೊಲೀಸ್ ಇಂಟೆಲಿಜೆನ್ಸ್ ಇನ್ಸ್‌ಪೆಕ್ಟರ್ ಜನರಲ್ ಅಜಯ್ ಯಾದವ್ ಬಾಘೇಲ್ ಹೊರತುಪಡಿಸಿ ಸಭೆಯಲ್ಲಿ ಭಾಗವಹಿಸಿದ್ದರು.

ಐಇಡಿ ಸ್ಫೋಟದಿಂದ ನಕ್ಸಲೀಯರು ಭದ್ರತಾ ಸಿಬ್ಬಂದಿಯಿದ್ದ ವಾಹನವನ್ನು ಸ್ಫೋಟಿಸಿದ್ದು, ದಾಳಿ ನಡೆಸಲು ನಕ್ಸಲೀಯರು 50 ಕೆಜಿಯಷ್ಟು ಸ್ಫೋಟಕಗಳನ್ನು ಒಳಗೊಂಡ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿದ್ದಾರೆ ಎಂಬದು ತಿಳಿದು ಬಂದಿದೆ.

ಇದನ್ನೂ ಓದಿ:ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: 10 ಮಂದಿ ಪೊಲೀಸರು ಹುತಾತ್ಮ

ABOUT THE AUTHOR

...view details