ರಾಯ್‌ಪುರ: ಛತ್ತೀಸ್‌ಗಢದಲ್ಲಿ ಚುನಾವಣೆ ಕಾವು ಜೋರಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಸೋಮವಾರ ಜನರ ಕಲ್ಯಾಣಕ್ಕಾಗಿ 'ಗೌರ-ಗೌರಿ' ಪೂಜೆಯನ್ನು ನೆರವೇರಿಸಿದರು. ಮುಖ್ಯಮಂತ್ರಿ ಬಘೇಲ್ ಅವರು ದುರ್ಗ್ ಜಿಲ್ಲೆಯ ಜಾಂಜ್ಗೀರ್ ಗ್ರಾಮದಲ್ಲಿ ನಡೆದ 'ಗೌರ-ಗೌರಿ' ಪೂಜೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಅವರು ಬುಡಕಟ್ಟು ಸಂಪ್ರದಾಯದ ಪ್ರಕಾರ ತಮ್ಮ ಕೈಗಳಿಗೆ ಚಾಟಿಯಿಂದ ಹೊಡೆಸಿಕೊಂಡರು. ಭಕ್ತಾದಿಗಳು ಮತ್ತು ಜನರು ಪೂಜೆಯನ್ನು ವೀಕ್ಷಿಸಲು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
''ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಚಾಟಿ ಏಟು ತಿಂದಿದ್ದೇನೆ'' ಎಂದು ಸಿಎಂ ಬಘೇಲ್ ಹೇಳಿದ್ದಾರೆ. "ಎಲ್ಲರ ಸಮೃದ್ಧಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. 'ಗೌರ-ಗೌರಿ' ಪೂಜೆಯನ್ನು ಪ್ರತಿಯೊಬ್ಬರೂ ಮಾಡುತ್ತಾರೆ. ಈ ಹಬ್ಬವು ಸಮಾನತೆಯ ಸಂಕೇತವಾಗಿರುವುದರಿಂದ ಎಲ್ಲಾ ಜನರು ಮುಂಜಾನೆಯೇ ಶಿವ ಹಾಗೂ ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ" ಎಂದು ಬಾಘೇಲ್ ತಿಳಿಸಿದರು.
ಗೊಂಡ ಬುಡಕಟ್ಟು ಜನರು ದೀಪಾವಳಿ ಹಬ್ಬದ ಸಮಯದಲ್ಲಿ ಈ ಪೂಜೆಯನ್ನು ನೆರವೇರಿಸುತ್ತಾರೆ. ಮೊದಲು ನದಿ ದಂಡೆಗೆ ಹೋಗಿ ಜೇಡಿಮಣ್ಣು ಸಂಗ್ರಹಿಸುತ್ತಾರೆ. ಅದೇ ರಾತ್ರಿ ಒಬ್ಬರ ಮನೆಯಲ್ಲಿ ಗೌರ (ಶಿವ) ಮೂರ್ತಿಯನ್ನು ಮತ್ತು ಇನ್ನೊಬ್ಬರ ಮನೆಯಲ್ಲಿ ಗೌರಿಯ (ಪಾರ್ವತಿ ದೇವಿ) ಮೂರ್ತಿ ಸಿದ್ಧಪಡಿಸುತ್ತಾರೆ. ಆ ಬಳಿಕ ಶಿವ- ಪಾರ್ವತಿಯ ದಿವ್ಯ ವಿವಾಹ ನಡೆಯುತ್ತದೆ.