ಜೈಪುರ(ರಾಜಸ್ಥಾನ):ರಾಜ್ಯ ವಿಧಾನಸಭಾ ಚುನಾವಣೆಯ ಮತ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬಿದ್ದಿದೆ. ಇದಕ್ಕೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರು ಓರ್ವ ನಟ ಮತ್ತು ಬಿಜೆಪಿ ನಾಯಕರು ಪಿತೂರಿಗಾರರು ಎಂದು ಟೀಕಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ನಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ಅದಕ್ಕಾಗಿಯೇ ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರ ನಾಯಕರು ಈಗ ಚುನಾವಣೆಯ ಸಮಯದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬಿಜೆಪಿಯವರು ಪಿತೂರಿಗಾರರು. ಮಹದೇವ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣೆಗೆ ನಾಲ್ಕು ದಿನ ಮುಂಚಿತವಾಗಿ ಛತ್ತೀಸ್‌ಗಢ ಸಿಎಂ ಬಂಧನಕ್ಕೆ ಸಂಚು ನಡೆದಿತ್ತು. ರಾಜಸ್ಥಾನದಲ್ಲಿ ಕೆಂಪು ಡೈರಿ ಕೂಡ ಬಿಜೆಪಿಯ ಷಡ್ಯಂತ್ರದ ಭಾಗ. ಆದರೆ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯವರ ಷಡ್ಯಂತ್ರ ಬಹಿರಂಗವಾಗಿದೆ ಎಂದು ತಿಳಿಸಿದರು.
ರಾಜಸ್ಥಾನದಲ್ಲಿ ಇಡಿ ದಾಳಿಯಲ್ಲಿ ಇದುವರೆಗೆ ಕಾಂಗ್ರೆಸ್ ನಾಯಕರನ್ನಾದರೂ ಬಂಧಿಸಲಾಗಿದೆಯೇ ಎಂದು ಪ್ರಶ್ನಿಸಿದ ಗೆಹ್ಲೋಟ್, ನಮ್ಮ ಕೆಲಸ ಮತ್ತು ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಲೋಪದೋಷಗಳನ್ನು ಎತ್ತಿ ತೋರಿಸುವಂತೆ ನಾವು ಮನವಿ ಮಾಡಿದ್ದೆವು. ಅದರ ಬಗ್ಗೆ ಬಿಜೆಪಿಯವರು ಯಾವುದೇ ಚರ್ಚೆ ನಡೆಯುತ್ತಿಲ್ಲ. ಕೇವಲ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ. ರಾಜ್ಯದ ಬಂದ ನಾಯಕರೆಲ್ಲ ಒಂದೇ ಭಾಷೆಯಲ್ಲಿ ಮಾತನಾಡುತ್ತಾ ಹೋಗಿದ್ದಾರೆ ಎಂದು ಕುಟುಕಿದರು.
ಅಲ್ಲದೇ, ನಾನು ಚುನಾವಣೆಯ ಸಮಯದಲ್ಲಿ ಗುಜರಾತ್‌ಗೆ ಹೋದಾಗ, ಪ್ರಧಾನಿ ಮೋದಿ ಅಲ್ಲಿ ಗುಜರಾತಿ-ರಾಜಸ್ಥಾನಿ ವಿಷಯ ಪ್ರಸ್ತಾಪಿಸಿದ್ದರು. ಆಗ ಮೋದಿ ನನ್ನನ್ನು ಉಲ್ಲೇಖಿಸಿ, "ಎ ರಾಜಸ್ಥಾನಿ ಚುನಾವಣೆಯ ಸಮಯದಲ್ಲಿ ಮತ ಕೇಳಲು ಬಂದಿದ್ದಾರೆ" ಎಂದು ಹೇಳಿದ್ದರು. ಆದರೆ, "ಗುಜರಾತಿ ಮತ ಕೇಳಲು ಬಂದಿದ್ದಾನೆ" ಎಂದು ನಾವು ಇಲ್ಲಿಯವರೆಗೆ ಹೇಳಿಲ್ಲ ಎಂದು ಗೆಹ್ಲೋಟ್ ಹೇಳಿದರು.
ಮೋದಿ ಅವರ ಲೋಕಸಭಾ ಕ್ಷೇತ್ರದ ವಾರಣಾಸಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ವರದಿಯಾಗಿದೆ. ಆದರೆ, ಬಿಜೆಪಿಯವರು ಇಲ್ಲಿನ (ರಾಜಸ್ಥಾನ) ಅತ್ಯಾಚಾರ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದಾರೆ. ವಾರಣಾಸಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ. ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಗುರಿಯಾದ ಹೆಣ್ಣು ಮಕ್ಕಳನ್ನು ಕತ್ತಲಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಕುಟುಂಬದ ಸದಸ್ಯರಿಗೆ ಸಂತ್ರಸ್ತೆಯ ಮುಖ ನೋಡಲೂ ಬಿಡಲಿಲ್ಲ ಎಂದು ಗೆಹ್ಲೋಟ್ ಟೀಕಾಪ್ರಹಾರ ನಡೆಸಿದರು.
ಇದನ್ನೂ ಓದಿ:ಪಿಎಂ ಮೋದಿಯನ್ನ ಟೀಕಿಸಿದ್ದ ರಾಹುಲ್ಗೆ ಚುನಾವಣಾ ಆಯೋಗದ ನೋಟಿಸ್: ಕಾಂಗ್ರೆಸ್ ಹೇಳಿದ್ದೇನು?