ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ನಾಗರಿಕ ಸೇವಾ ಪ್ರಾಧಿಕಾರ ರಚನೆ ಕುರಿತ ಸುಗ್ರೀವಾಜ್ಞೆ ಸಂಬಂಧ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮರಕ್ಕಿಳಿದಿದ್ದಾರೆ. ಇದರ ನಡುವೆ ನಾಳೆ (ಮೇ 27) ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಕೇಜ್ರಿವಾಲ್ ಬಹಿಷ್ಕರಿಸಲಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ದೆಹಲಿ ಸಿಎಂ ಪತ್ರ ಬರೆದಿದ್ದಾರೆ. ಚುನಾಯಿತ ಸರ್ಕಾರವೇ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕೆಂಬ ಸುಪ್ರೀಂಕೋರ್ಟ್ ಆದೇಶವನ್ನು ಪ್ರಧಾನಿ ಪಾಲಿಸದಿದ್ದರೆ ಜನರು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯೇತರ ಸರ್ಕಾರಗಳು ಕೆಲಸ ಮಾಡಲು ಪ್ರಧಾನಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಜ್ರಿವಾಲ್ ಪತ್ರದಲ್ಲಿ ಏನಿದೆ?: ಪ್ರಧಾನಿಗಳೇ ನಾಳೆ ನೀತಿ ಆಯೋಗದ ಸಭೆ ಇದೆ. ನೀತಿ ಆಯೋಗದ ಉದ್ದೇಶವು ಭಾರತದ ದೃಷ್ಟಿಕೋನವನ್ನು ಸಿದ್ಧಪಡಿಸುವುದರೊಂದಿಗೆ ಸಹಕಾರಿ ಒಕ್ಕೂಟವನ್ನು ಉತ್ತೇಜಿಸುವುದು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿ ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸಲಾಗುತ್ತಿದೆ ಅಥವಾ ಒಡೆಯಲಾಗುತ್ತಿದೆ ಅಥವಾ ಕೆಲಸ ಮಾಡಲು ಬಿಡುತ್ತಿಲ್ಲ. ಇದು ನಮ್ಮ ಭಾರತದ ದೃಷ್ಟಿಯಿಂದಲೂ ಅಥವಾ ಒಕ್ಕೂಟ ದೃಷ್ಟಿಯಿಂದಲೂ ಸರಿಯಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಕೇಂದ್ರದ ಸುಗ್ರೀವಾಜ್ಞೆಗೆ ಕೇಜ್ರಿವಾಲ್ ವಿರೋಧ... ಮೋದಿ ವಿರುದ್ಧ ಹೋರಾಟಕ್ಕೆ ಮಮತಾ ಸಾಥ್!
ಅಲ್ಲದೇ, ಯಾವುದೇ ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷದ ಸರ್ಕಾರವನ್ನು ಜನರು ರಚಿಸಿದರೆ, ಅದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ದೇಶದಾದ್ಯಂತ ನೀಡಲಾಗುತ್ತಿದೆ. ಇದರಲ್ಲಿ ಶಾಸಕರನ್ನು ಖರೀದಿಸಿ ಬಿಜೆಪಿಯೇತರ ಸರ್ಕಾರ ಬೀಳಿಸುವುದು. ಇಲ್ಲವೇ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಭಯ ತೋರಿಸಿ ಶಾಸಕರನ್ನು ಒಡೆದು ಸರ್ಕಾರ ಬೀಳಿಸುವುದು ಮಾಡಲಾಗುತ್ತಿದೆ. ಇದರ ಹೊರತಾಗಿ ಯಾವುದೇ ಪಕ್ಷದ ಶಾಸಕರು ಮಾರಾಟವಾಗಿದ್ದರೆ ಮತ್ತು ಸರ್ಕಾರ ಒಡೆಯದಿದ್ದರೆ ಸುಗ್ರೀವಾಜ್ಞೆ ಜಾರಿಗೊಳಿಸಿ ಅಥವಾ ರಾಜ್ಯಪಾಲರ ಮೂಲಕ ಕೆಲಸ ಮಾಡಲು ಸರ್ಕಾರಕ್ಕೆ ಅವಕಾಶ ನೀಡದಂತೆ ಪರಿಸ್ಥಿತಿ ಎಂದು ದೂರಿದ್ದಾರೆ.