ಕರ್ನಾಟಕ

karnataka

ETV Bharat / bharat

ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಹೋರಾಟ: ಸಿಎಂ ಕೇಜ್ರಿವಾಲ್​ಗೆ ಸೀತಾರಾಂ ಯೆಚೂರಿ ಬೆಂಬಲ

ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಸಂಬಂಧ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಇತರ ನಾಯಕರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿಯಾದರು.

cm-arvind-kejriwal-meets-sitaram-yechury-over-central-ordinance-in-delhi
ಸಿಎಂ ಕೇಜ್ರಿವಾಲ್​ಗೆ ಸೀತಾರಾಂ ಯೆಚೂರಿ ಬೆಂಬಲ

By

Published : May 30, 2023, 4:17 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಆಡಳಿತಾತ್ಮಕ ಸೇವೆಗಳ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಮೂಲಕ ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಆಮ್​ ಆದ್ಮಿ ಪಕ್ಷದ ಹೋರಾಟವನ್ನು ಯೆಚೂರಿ ಬೆಂಬಲಿಸಿದ್ದಾರೆ.

ದೆಹಲಿಯ ಸಿಪಿಐ(ಎಂ) ಪಕ್ಷದ ಕಚೇರಿಯಲ್ಲಿ ಕೇಜ್ರಿವಾಲ್ ಮತ್ತು ಯೆಚೂರಿ ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದರು. ನಾವು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಖಂಡಿಸುತ್ತೇವೆ. ಇದು ಅಸಂವಿಧಾನಿಕವಾಗಿದೆ. ಅಲ್ಲದೇ, ಇಂದು ನ್ಯಾಯಾಂಗ ನಿಂದನೆಯಾಗಿದೆ. ನಾವು ಅತಿದೊಡ್ಡ ಪಕ್ಷವಾದ ಕಾಂಗ್ರೆಸ್​ಗೂ ಸಾಂವಿಧಾನ ಉಳಿಸಲು ಮುಂದೆ ಬರುವಂತೆ ಮನವಿ ಮಾಡುತ್ತೇವೆ ಎಂದು ಯೆಚೂರಿ ತಿಳಿಸಿದರು.

ಈ ವಿಚಾರದಲ್ಲಿ ನಾವು ಆಮ್ ಆದ್ಮಿ ಪಕ್ಷದ ಜೊತೆಗಿದ್ದೇವೆ. ಕೇಂದ್ರ ಸರ್ಕಾರದ ಈ ಸುಗ್ರೀವಾಜ್ಞೆ ಯಾವುದೇ ಕಾರಣಕ್ಕೂ ದೇಶದ ಸಾಂವಿಧಾನಿಕ ವ್ಯವಸ್ಥೆಗೆ ಒಳ್ಳೆಯದಲ್ಲ. ಹೀಗಾಗಿ ಅದು ರಾಜ್ಯಸಭೆಯಾಗಲಿ ಅಥವಾ ಎಲ್ಲೇ ಇರಲಿ ನಾವು ಸುಗ್ರೀವಾಜ್ಞೆಯನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ಇದರ ನಂತರ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಇಂದು ಹಿರಿಯ ನಾಯಕ ಸೀತಾರಾಂ ಯೆಚೂರಿ ಮತ್ತು ಸಿಪಿಐ(ಎಂ) ಇತರ ನಾಯಕರೊಂದಿಗೆ ಸುಗ್ರೀವಾಜ್ಞೆ ವಿಷಯ ಸಂಬಂಧ ಚರ್ಚಿಸಲಾಯಿತು. ಮೋದಿ ಸರ್ಕಾರ ದೆಹಲಿ ಜನತೆಗೆ ಅನ್ಯಾಯ ಮಾಡುತ್ತಿದೆ ಎಂದು ಎಲ್ಲ ನಾಯಕರು ನಂಬಿದ್ದಾರೆ. ಸಿಪಿಐ(ಎಂ) ಕೂಡ ದೆಹಲಿಯ ಜನತೆಗೆ ಬೆಂಬಲವಾಗಿ ರ‍್ಯಾಲಿಯನ್ನು ಆಯೋಜಿಸಿದ್ದು, ಸಂಸತ್ತಿನಲ್ಲೂ ಜನತೆಯ ಜೊತೆ ನಿಲ್ಲಲಿದೆ. ದೆಹಲಿ ಜನತೆಯ ಪರವಾಗಿ ನಾನು ಯೆಚೂರಿ ಮತ್ತು ಇತರ ಎಲ್ಲ ನಾಯಕರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಕೇಂದ್ರದ ಸುಗ್ರೀವಾಜ್ಞೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಮತ್ತು ಖಂಡಿಸುತ್ತೇನೆ. ಈ ವಿಷಯವು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಬಿಜೆಪಿಯೇತರ ಯಾವುದೇ ರಾಜ್ಯದ ಮೇಲೂ ಪರಿಣಾಮ ಬೀರಬಹುದು. ಈ ಸುಗ್ರೀವಾಜ್ಞೆಯನ್ನು ವಿರೋಧಿಸಲು ಮತ್ತು ಮೋದಿ ಸರ್ಕಾರದಿಂದ ಸಂವಿಧಾನದ ಮೇಲಿನ ಅತಿಕ್ರಮಣದಿಂದ ರಕ್ಷಿಸಿಕೊಳ್ಳಲು ನಾನು ಎಲ್ಲ ಪ್ರತಿಪಕ್ಷಗಳಿಗೆ ಮನವಿ ಮಾಡುತ್ತೇನೆ ಎಂಬ ಯೆಚೂರಿ ಹೇಳಿಕೆ ಉಲ್ಲೇಖಿಸಿ ಆಮ್​ ಆದ್ಮಿ ಪಕ್ಷ ಸಹ ಟ್ವೀಟ್​ ಮಾಡಿದೆ.

ಇತ್ತೀಚೆಗೆ ದೆಹಲಿಯಲ್ಲಿ ಚುನಾಯಿತ ಸರ್ಕಾರವೇ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ, ಇದರ ಬೆನ್ನಲ್ಲೇ ನಾಗರಿಕ ಸೇವಾ ಪ್ರಾಧಿಕಾರವನ್ನು ರಚಿಸಲು ಕೇಂದ್ರ ಸುಗ್ರೀವಾಜ್ಞೆ ಹೊರಡಿಸಿದೆ. ಜುಲೈನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗ ಸುಗ್ರೀವಾಜ್ಞೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಎದುರು ನೋಡುತ್ತಿದೆ.

ಲೋಕಸಭೆಯಲ್ಲಿ ಬಿಜೆಪಿಗೆ ಸರಳ ಬಹುಮತ ಇರುವುದರಿಂದ ಈ ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆಯುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ರಾಜ್ಯಸಭೆಯಲ್ಲಿ ಈ ವಿವಾದಾತ್ಮಕ ಸುಗ್ರೀವಾಜ್ಞೆ ಅಂಗೀಕಾರಕ್ಕೆ ಸ್ವಲ್ಪ ಕಷ್ಟವಾಗಲಿದೆ. ಆದ್ದರಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಆಮ್​ ಆದ್ಮಿ ಪಕ್ಷವು ಸಂಸತ್ತಿನಲ್ಲಿ ಈ ಸುಗ್ರೀವಾಜ್ಞೆಗೆ ತಡೆ ಹಾಕಬೇಕೆಂದು ಪ್ರಯತ್ನಿಸುತ್ತಿದೆ. ಹೀಗಾಗಿ ಪ್ರತಿಪಕ್ಷಗಳ ಬೆಂಬಲವನ್ನು ಅರವಿಂದ್ ಕೋರುತ್ತಿದ್ದಾರೆ.

ಈ ನಿಟ್ಟಿನಲ್ಲಿ ಈಗಾಗಲೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿ ಯಾದವ್, ಮಹಾರಾಷ್ಟ್ರ ಮಾಜಿ ಸಿಎಂಗಳಾದ ಶರದ್ ಪವಾರ್, ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನೂ ಭೇಟಿ ಮಾಡಲು ಸಮಯ ಕೋರಿದ್ದಾರೆ. ಆದರೆ, ಈ ಸಭೆ ಇನ್ನೂ ನಿಗದಿಯಾಗಿಲ್ಲ.

ಇದನ್ನೂ ಓದಿ:ದೆಹಲಿಯ ಸುಗ್ರೀವಾಜ್ಞೆ ಅಂಗೀಕರಿಸಲು ಬಿಜೆಪಿ ವಿಫಲವಾದರೆ, ಅದೇ ದೇಶಕ್ಕೆ ಸಂದೇಶ: ಪವಾರ್ ಭೇಟಿ ಬಳಿಕ ಕೇಜ್ರಿವಾಲ್ ಹೇಳಿಕೆ

ABOUT THE AUTHOR

...view details