ಚಂಬಾ (ಹಿಮಾಚಲ ಪ್ರದೇಶ): ಜಿಲ್ಲೆಯ ಮೆಹ್ಲಾ ಬ್ಲಾಕ್ನಲ್ಲಿ ಮೇಘಸ್ಫೋಟ ಸಂಭವಿಸಿದ್ದು ಜಡಿ ಮಳೆಯಾಗಿದೆ. ಪರಿಣಾಮ ಹಲವಾರು ಮನೆ, ರಸ್ತೆಗಳು ಹಾನಿಗೊಳಗಾಗಿವೆ.
ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಚಂಬಾ ಪಟ್ಟಣದಿಂದ 20 ಕಿ.ಮೀ ದೂರದಲ್ಲಿರುವ ಕಾನರ್ ಗ್ರಾಮದ ಬಳಿಯ ನದಿ ಸಾಹೋ-ಪಲ್ಯೂರ್ ಉಕ್ಕಿ ಹರಿದಿದ್ದು, ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕೊಚ್ಚಿ ಹೋಗಿದೆ. ಘಟನೆಯಿಂದ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಜೋರು ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ನದಿ ಏನಿದು ಮೇಘ ಸ್ಫೋಟ..?
ಅನಿರೀಕ್ಷಿತವಾಗಿ ಕುಂಭದ್ರೋಣ ಮಳೆಯಾದರೆ ಸಾಮಾನ್ಯವಾಗಿ ಮೇಘಸ್ಪೋಟ ಎಂದು ಹೇಳಲಾಗುತ್ತದೆ. ಹೆಸರೇ ಸೂಚಿಸುವಂತೆ ಒಂದು ರೀತಿ ಮೋಡಗಳು ಸ್ಪೋಟಗೊಂಡು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಕೇವಲ ಮಳೆ ಮಾತ್ರವಲ್ಲದೆ ಈ ಸಂದರ್ಭದಲ್ಲಿ ಭಾರೀ ಗಾಳಿ, ಸಿಡಿಲು ಉಂಟಾಗುತ್ತದೆ. ಗಾಳಿಯ ತೀವ್ರತೆಗೆ ಅಗ್ನಿ ಅವಘಡದಂತಹ ಅನಾಹುತಗಳು ನಡೆದಿದ್ದೂ ಇದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದರಿಂದ ನದಿಗಳು ಉಕ್ಕಿ ಹರಿದು ಪ್ರವಾಹ ಸಂಭವಿಸುತ್ತದೆ. ಎರಡು ವರ್ಷಗಳ ಹಿಂದೆ ಉತ್ತರಾಖಂಡ ರಾಜ್ಯ ಮೇಘಸ್ಫೋಟದ ಹೊಡೆತಕ್ಕೆ ತತ್ತರಿಸಿ ಹೋಗಿರುವುದನ್ನು ಸ್ಮರಿಸಬಹುದು.