ಹೈದರಾಬಾದ್:ಕೊರೊನಾ ವೈರಸ್ ಮನುಷ್ಯರಲ್ಲಿ ಮಾತ್ರವಲ್ಲದೇ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವುದು ಹಳೆಯ ವಿಚಾರ. ಆದರೆ, ಇದೇ ಮೊದಲ ಬಾರಿಗೆ ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳಲ್ಲಿ ಸೋಂಕು ಕಂಡುಬಂದಿದೆ. ಹೈದರಾಬಾದ್ನಲ್ಲಿರುವ ನೆಹರು ಮೃಗಾಲಯದಲ್ಲಿ ಎಂಟು ಸಿಂಹಗಳಲ್ಲಿ ಕೋವಿಡ್ ದೃಢಪಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣಾ ಪ್ರಯೋಗಾಲಯದ ವಿಜ್ಞಾನಿ ಡಾ. ಕಾರ್ತಿಕೇಯನ್ ವಾಸುದೇವನ್ ಕೋವಿಡ್ ಮನುಷ್ಯನಿಂದ ಪ್ರಾಣಿಗಳಿಗೆ ಹರಡಬಹುದು ಎಂದು ಹಲವು ವರದಿಗಳು ತಿಳಿಸಿವೆ. ಆದ್ದರಿಂದ ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಜಯಲಲಿತಾ ನಂತರ ಸದನದಲ್ಲಿ ಕಡಿಮೆಯಾದ ಮಹಿಳಾ ಪ್ರಾತಿನಿಧ್ಯ
ಪ್ರಾಣಿಗಳಿಗೆ ಕೋವಿಡ್ ಹರಡುವುದು ಮೊದಲಿಗೆ ಅಮೆರಿಕ, ಯೂರೋಪ್ನ ಕೆಲವು ರಾಷ್ಟ್ರಗಳಲ್ಲಿ ಪತ್ತೆಯಾಗಿತ್ತು. ಮಿಂಕ್ ಎಂಬ ಜಾತಿಯ ಪ್ರಾಣಿಗಳಿಗೂ ಇದು ಹರಡಿದ್ದು, ಸೋಂಕು ಮರಳಿ ಮನುಷ್ಯನಿಗೆ ಹರಡಬಾರದೆಂದು ಅವುಗಳನ್ನು ಕೊಲ್ಲಲಾಯಿತು. ಈಗ ಭಾರತದಲ್ಲಿ ಸಿಂಹಗಳಿಗೆ ಸೋಂಕು ಕಂಡು ಬಂದಿರುವ ಕಾರಣದಿಂದ ನಾವು ಎರಡು ಪಟ್ಟು ಜಾಗರೂಕತೆ ವಹಿಸುವ ಅನಿವಾರ್ಯತೆ ಇದೆ ಎಂದು ಡಾ.ಕಾರ್ತಿಕೇಯನ್ ವಾಸುದೇವನ್ ಅಭಿಪ್ರಾಯಪಟ್ಟಿದ್ದಾರೆ.
ವಿಜ್ಞಾನಿಗಳು ನೀಡುವ ಸಲಹೆಯೇನು?
ಪ್ರಾಣಿಗಳನ್ನು ಸಂರಕ್ಷಿಸುವ ಸಲುವಾಗಿ, ಅವುಗಳಿಗೆ ಸೋಂಕು ಹರಡದಂತೆ ತಡೆಯಲು ಮೃಗಾಲಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಮುಚ್ಚಲು ವಾಸುದೇವನ್ ಸಲಹೆ ನೀಡಿದ್ದಾರೆ. ಈ ಕೊರೊನಾ ಸಾಂಕ್ರಾಮಿಕ ರೋಗ ಕೊನೆಗೊಳ್ಳುವವರೆಗೆ ಸಾಕು ಪ್ರಾಣಿಗಳಾದ ಬೆಕ್ಕು ಮತ್ತು ನಾಯಿಗಳಿಂದ ಸುರಕ್ಷಿತ ದೂರ ಕಾಪಾಡಿಕೊಳ್ಳುವುದು ಉತ್ತಮ ಎಂದಿದ್ದಾರೆ.
ಸಾಕು ಪ್ರಾಣಿಗಳಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದರೆ ಅವುಗಳನ್ನು ಪರೀಕ್ಷೆಗೆ ಒಳಪಡಿಸುವುದು ಉತ್ತಮ ಎಂದಿದ್ದು, ಪ್ರಾಣಿಗಳಲ್ಲಿ ಕೋವಿಡ್ ಪತ್ತೆಹಚ್ಚಲು ಮೀಸಲಾಗಿರುವ ಲಾಬ್ಗಳಿಗೆ ಪ್ರಾಣಿಗಳನ್ನು ತರಬೇಕೆಂದು ವಾಸುದೇವನ್ ಸಲಹೆ ನೀಡಿದ್ದಾರೆ.