ಶ್ರೀನಗರ (ಜಮ್ಮು-ಕಾಶ್ಮೀರ): ಕೆಲ ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಬಯಲು ಸೀಮೆ ಮತ್ತು ಎತ್ತರದ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಪಮಾನದಲ್ಲಿ ಗಮನಾರ್ಹ ಕುಸಿತವಾಗಿದೆ. ಪರಿಣಾಮ, ಝೆಲಂ ನದಿ ಮತ್ತು ಅದರ ಉಪನದಿಗಳ ನೀರಿನ ಮಟ್ಟ ಏರಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು-ಕಾಶ್ಮೀರದ ಆರು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ನಿರಂತರ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಮೊಘಲ್ ರಸ್ತೆ ಮತ್ತು ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಸಹ ಮುಚ್ಚಲಾಗಿದೆ.
ಇನ್ನು ಝೆಲಂ ನದಿ, ಅದರ ಉಪನದಿಗಳು ಮತ್ತು ಇತರ ಕಾಲುವೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬೆಳಗ್ಗೆ 10 ಗಂಟೆ ವೆಳೆ ಝೆಲಂ ನದಿಯ ಮಟ್ಟ ಸಂಗಮ್ ಬಳಿ 18.18 ಅಡಿ, ಪಂಪೋರ್ ಬಳಿ 2.72 ಮೀ, ಮತ್ತು ರಾಮ್ ಮುನ್ಷಿ ಬಾಗ್ ಬಳಿ 12.02 ಅಡಿ ಇತ್ತು.