ಲಕ್ನೋ (ಉತ್ತರ ಪ್ರದೇಶ): ಇಲ್ಲಿನ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ತರಗತಿಯಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟೊತ್ತಿಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ತಪಾಸಣೆ ನಡೆಸಿದ ಬಳಿಕ ವೈದ್ಯರು ತಿಳಿಸಿದ್ದಾರೆ.
ಮಗನನ್ನು ಕಳೆದುಕೊಂಡು ಆಘಾತದಲ್ಲಿರುವ ಕುಟುಂಬಕ್ಕೆ ನಾವು ನೆರವಾಗುತ್ತೇವೆ. ಯಾವುದೇ ತನಿಖೆಗೂ ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದು ಶಾಲೆಯ ಆಡಳಿತ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಲಿಗಂಜ್ ಶಾಖೆಯ ಸಿಟಿ ಮಾಂಟೆಸ್ಸರಿ ಶಾಲೆಯ ವಿದ್ಯಾರ್ಥಿ ಅತೀಫ್ ಸಿದ್ದಿಕಿ ಬುಧವಾರ ರಸಾಯನಶಾಸ್ತ್ರ ತರಗತಿಯ ಸಮಯದಲ್ಲಿ ಮೂರ್ಛೆ ಹೋದನು. ಕೂಡಲೇ ಶಿಕ್ಷಕಿ ಹಾಗೂ ನರ್ಸ್ ಕಾರ್‌ನಲ್ಲಿ ಸಮೀಪದ ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದರು. ಅಷ್ಟೊತ್ತಿಗಾಗಲೇ ಮಗುವಿನ ತಂದೆಗೂ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಅವರೂ ಅಲ್ಲಿಗೆ ತಲುಪಿದ್ದರು. ವೈದ್ಯರು ಹಲವು ಬಾರಿ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ನೀಡಿದರೂ ಪ್ರಜ್ಞೆ ಬರದಿದ್ದಾಗ, ಹೃದಯಾಘಾತವಾಗಿರಬಹುದು ಎಂದು ವೈದ್ಯರು ತಿಳಿಸಿದರು. ತಕ್ಷಣವೇ ಕಾರ್ಡಿಯಾಲಜಿ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಸೂಚಿಸಿದರು. ಶಿಕ್ಷಕರು ಮತ್ತು ನರ್ಸ್ ಮಗುವನ್ನು ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕ ಸಿಲಿಂಡರ್‌ನೊಂದಿಗೆ ಆಸ್ಪತ್ರೆಗೆ ಕರೆದೊಯ್ದರು. ಹೃದ್ರೋಗ ತುರ್ತುಸ್ಥಿತಿ ಕೋಣೆಗೆ ದಾಖಲಿಸಿ ಪರೀಕ್ಷೆಯ ನಂತರ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿರುವುದಾಗಿ ಶಾಲೆಯ ವಕ್ತಾರ ರಿಷಿ ಖನ್ನಾ ಮಾಹಿತಿ ನೀಡಿದರು.