ನವದೆಹಲಿ:ಪೂರ್ವ ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ 3ನೇ ತರಗತಿ ಓದುತ್ತಿದ್ದ ಎಂಟು ವರ್ಷದ ಬಾಲಕಿಯ ಮೇಲೆ ಶಾಲಾ ಆವರಣದಲ್ಲಿಯೇ ಅತ್ಯಾಚಾರ ಎಸಗಿದ ಗಂಭೀರದ ಆರೋಪದಡಿ 40 ವರ್ಷದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯೂ ಅಶೋಕ್ ನಗರ ಪ್ರದೇಶದಲ್ಲಿರುವ ಶಾಲೆಯಲ್ಲಿ ಆರೋಪಿ 2016ರಿಂದ ಕೆಲಸ ಹೊಂದಿದ್ದರು. ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಈ ಘಟನೆ ಕಳೆದ ವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಗುವಿಗೆ ಆಮಿಷವೊಡ್ಡಿದ್ದ ಕ್ರೀಡಾ ಶಿಕ್ಷಕ ಶಾಲೆಯೊಳಗಿನ ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ ವರ್ತನೆಯ ಬಗ್ಗೆ ತಾಯಿಗೆ ಅನುಮಾನ ಮೂಡಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ತಾಯಿಯ ಎದುರು ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ. ಹೀಗಾಗಿ ಇಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
''ಸುಮಾರು ನಾಲ್ಕೈದು ದಿನಗಳ ಹಿಂದೆ ನಡೆದ ಘಟನೆಯ ಬಗ್ಗೆ ದೂರು ಬಂದ ನಂತರ ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಯಿತು. ಬಾಲಕಿಗೆ ಕೌನ್ಸಿಲಿಂಗ್ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆರೋಪಿ ಕ್ರೀಡಾ ಶಿಕ್ಷಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಹಾಗೂ ಇತರ ಸಂಬಂಧಿತ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಉಪಪೊಲೀಸ್ ಆಯುಕ್ತ (ಪೂರ್ವ) ಅಮೃತ ಗುಗುಲೋತ್ ಹೇಳಿದರು.
ಕಾಮುಕರ ಅಟ್ಟಹಾಸ:ಹೈದರಾಬಾದ್ನಲ್ಲಿಯೂ ಇಂಥದ್ದೇ ಅಮಾನವೀಯ ಮತ್ತು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯ ಮೇಲೆ ಕಾಮುಕರು ಅಟ್ಟಹಾಸ ಮೆರೆದ ಘಟನೆ ಚಂದ್ರಾಯನಗುಟ್ಟ ಪ್ರದೇಶದ ಛತ್ರಿನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಂಜಾ ಸೇವಿಸಿದ ಗುಂಗಿನಲ್ಲಿ 15 ವರ್ಷ ವಯಸ್ಸಿನ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ, ಅತ್ಯಾಚಾರ ಎಸಗಿದ್ದಾರೆ.