ಕರ್ನಾಟಕ

karnataka

ETV Bharat / bharat

ಶಾಲೆಯಲ್ಲಿ ಬಾಲ್​ ಎಂದು ತಿಳಿದು ಬಾಂಬ್​ ಜೊತೆ ಆಟ; ಸ್ಫೋಟಗೊಂಡು ವಿದ್ಯಾರ್ಥಿ ಸಾವು, ಹಲವರಿಗೆ ಗಾಯ - ಬಾಂಬ್ ಸ್ಫೋಟ

ಪಶ್ಚಿಮ ಬಂಗಾಳದ ಶಾಲೆಯೊಂದರ ಬಳಿ ಮಧ್ಯಾಹ್ನದ ಊಟದ ವೇಳೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 2ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

bomb as toy  dies in blast  blast in Murshidabad  ಬಾಂಬ್​ ಜೊತೆ ಆಟ  ವಿದ್ಯಾರ್ಥಿ ಸಾವು  ಬಾಂಬ್ ಸ್ಫೋಟ
ಪೋಷಕರ ಆಕ್ರಂದನ

By ETV Bharat Karnataka Team

Published : Jan 5, 2024, 8:49 AM IST

ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಮಧ್ಯಾಹ್ನದ ಊಟದ ವೇಳೆ ಶಾಲೆಯ ಆವರಣದಲ್ಲಿ ಬಾಂಬ್ ಸ್ಫೋಟಗೊಂಡು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುರ್ಷಿದಾಬಾದ್‌ನ ದೌಲತಾಬಾದ್ ಪೊಲೀಸ್ ಠಾಣೆಯ ಚೋಯಾದಂಗದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಮುಕ್ಲೇಸೂರ್ ರೆಹಮಾನ್ (7) ಎಂದು ಗುರುತಿಸಲಾಗಿದ್ದು, ಆತ ಎರಡನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆಯಿಂದ ಬಾಲಕನ ಕುಟುಂಬಸ್ಥರು ಆಘಾತಗೊಂಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಶಾಲೆಯ ಆವರಣದಲ್ಲಿ ಬಾಂಬ್ ಪತ್ತೆಯಾಗಿದ್ದರಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಮಾಹಿತಿ ಪಡೆದ ದೌಲತಾಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಸದ್ಯ ಗಾಯಗೊಂಡ ಮೂವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರು ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಮುಕ್ಲೇಸೂರ್ ರೆಹಮಾನ್ ಎಂದಿನಂತೆ ನಿನ್ನೆ ಬೆಳಗ್ಗೆ ದೌಲತಾಬಾದ್‌ನ ಚೋಯದಂಗ ಗ್ರಾಮದ ಪ್ರಾಥಮಿಕ ಶಾಲೆಗೆ ತೆರಳಿದ್ದ. ಮಧ್ಯಾಹ್ನ ಊಟ ಮುಗಿಸಿ ತನ್ನ ಸ್ನೇಹಿತರೊಂದಿಗೆ ಶಾಲೆಯ ಸುತ್ತಮುತ್ತ ಆಟವಾಡುತ್ತಿದ್ದ. ಅಷ್ಟರಲ್ಲಿ ಬಾಂಬ್ ಕಣ್ಣಿಗೆ ಬಿದ್ದಿದೆ. ಆದರೆ, ಮುಕ್ಲೇಸೂರ್​ ಅದನ್ನು ಬಾಲ್​ ಎಂದು ಭಾವಿಸಿದ್ದಾನೆ. ಈ ವೇಳೆ ಮುಕ್ಲೇಸೂರ್​ ಬಾಂಬ್​ನ್ನು ತೆಗೆದುಕೊಂಡು ಎದುರಿನ ಗೋಡೆಗೆ ಎಸೆದಿದ್ದಾನೆ. ಆಗ ಸ್ಫೋಟಗೊಂಡಿದ್ದು, ಬಾಲಕ ಮುಕ್ಲೇಸೂರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತರ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾರಿ ಶಬ್ದ ಕೇಳಿದ ಬಳಿಕ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ವಿದ್ಯಾರ್ಥಿಗಳು ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ. ಬಾಲಕ ಮುಕ್ಲೇಸೂರ್​ ಸ್ಥಳದಲ್ಲಿ ಅಸುನೀಗಿದ್ದ. ಸ್ಥಳೀಯರಿಂದ ಮಾಹಿತಿ ಪಡೆದ ವಿದ್ಯಾರ್ಥಿಯ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ದೌಲತಾಬಾದ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವವನ್ನು ವಶಪಡಿಸಿಕೊಂಡು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದರು.

ಘಟನೆ ಬಗ್ಗೆ ಸ್ಥಳೀಯ ನಿವಾಸಿ ಅನ್ಸಾರ್ ಶೇಖ್ ಮಾತನಾಡಿ, 'ಬಾಂಬ್ ಸ್ಫೋಟದ ಸದ್ದು ಕೇಳಿ ನಾನು ಬೆಚ್ಚಿಬಿದ್ದೆ. ಶಾಲೆ ಬಳಿ ಬಾಂಬ್ ಇಟ್ಟಿದ್ದು ಅಪರಾಧ ಅಕ್ಷಮ್ಯ, ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆಯಾಗಲಿ' ಎಂದು ಆಗ್ರಹ ಮಾಡಿದರು. ಈ ಘಟನೆ ಕುರಿತು ದೌಲತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಶೋಪಿಯಾನ್‌ನಲ್ಲಿ ಭದ್ರತಾ ಪಡೆ- ಭಯೋತ್ಪಾದಕರ ನಡುವೆ ಎನ್‌ಕೌಂಟರ್

ABOUT THE AUTHOR

...view details