ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಓದುವಾಗ ಮೊಬೈಲ್ ನೋಡುತ್ತಾ ಕುಳಿತಿದ್ದರಿಂದ ಬೈದು, ಕೆನ್ನೆಗೆ ಬಾರಿಸಿದ ತಾಯಿಯನ್ನು ಮಗನೋರ್ವ ಕೊಲೆ ಮಾಡಿದ್ದಾನೆ. ಕೃತ್ಯದ ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬಂತೆ ಆತ ಬಿಂಬಿಸಿದ್ದ. ಆದರೆ, ಪೊಲೀಸ್ ತನಿಖೆಯಲ್ಲಿ ಸತ್ಯ ಬೆಳಕಿಗೆ ಬಂದಿದ್ದು, ಆರೋಪಿ ಜೈಲು ಸೇರಿದ್ದಾನೆ.
ಇಲ್ಲಿನ ಉರ್ಲಿ ಕಾಂಚನ್ ನಿವಾಸಿ 37 ವರ್ಷದ ತಸ್ಲೀಮ್ ಜಮೀರ್ ಶೇಖ್ ಎಂಬ ಮಹಿಳೆ ಮಗನಿಂದ ಕೊಲೆಯಾಗಿದ್ದಾರೆ. ಆರೋಪಿ ಜಿಶಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಈತ 12ನೇ ತರಗತಿ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ. ತಸ್ಲೀಮ್ ಸಾವಿನ ಬಗ್ಗೆ ವೈದ್ಯರು ಮತ್ತು ಪೊಲೀಸರು ಅನುಮಾನ ವ್ಯಕ್ತಪಡಿಸಿದಾಗ ಸತ್ಯ ಬಹಿರಂಗವಾಗಿದೆ.
ಸಂಪೂರ್ಣ ವಿವರ:ಫೆಬ್ರವರಿ 15ರಂದು ಮಧ್ಯಾಹ್ನ 3:30ರ ಸುಮಾರಿಗೆ ಉರ್ಲಿ ಕಾಂಚನದ ಮೌಲಿ ಕೃಪಾ ಕಟ್ಟಡದಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ವೈದ್ಯರಿಗೆ ಇದು ಆತ್ಮಹತ್ಯೆಯಲ್ಲ ಎಂಬ ಸಂಶಯ ಮೂಡಿದೆ.
ಹೀಗಾಗಿ ಮೂವರು ವೈದ್ಯರ ನೇತೃತ್ವದಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಆಗ ಕತ್ತು ಹಿಸುಕಿರುವುದು ಮತ್ತು ತಲೆಗೆ ಗಾಯವಾಗಿರುವುದು ಕಂಡುಬಂದಿದೆ. ವೈದ್ಯರ ವರಧಿ ಆಧರಿಸಿ ಪೊಲೀಸರು ಸೂಕ್ಷ್ಮವಾಗಿ ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದಾಗ ಮನೆಯಲ್ಲಿ ತಸ್ಲೀಮ್ ಪತಿ ಜಮೀರ್ ಮತ್ತು ಮಗ ಜಿಶಾನ್ ಇಬ್ಬರು ಮಾತ್ರವೇ ಇದ್ದರು ಎಂಬುವುದನ್ನು ಖಾತ್ರಿ ಮಾಡಿಕೊಂಡು ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ.
ಕೃತ್ಯ ಬಾಯ್ಬಿಟ್ಟ ಪುತ್ರ: ತಸ್ಲೀಮ್ ಬಗ್ಗೆ ಅನುಮಾನಗೊಂಡ ಪೊಲೀಸರು ತಂದೆ ಮತ್ತು ಮಗನನ್ನು ವಿಚಾರಿಸಿದಾಗ ತಾಯಿಯನ್ನು ಕೊಂದ ಕೃತ್ಯವನ್ನು ಮಗ ಬಾಯ್ಬಿಟ್ಟಿದ್ದಾನೆ. ''ಅಂದು ನನ್ನ ತಂದೆ ಜಮೀರ್ ಶೇಖ್ ನಮಾಜ್ ಮಾಡಲು ತೆರಳಿದ್ದರು. ಕಿರಿಯ ಸಹೋದರಿ ಹೊರಗೆ ಹೋಗಿದ್ದರು. ನಾನು ಓದುವಾಗ ಮೊಬೈಲ್ ನೋಡುತ್ತಾ ಕುಳಿತಿದ್ದೆ. ಅದನ್ನು ಗಮನಿಸಿದ ತಾಯಿ ಸಿಟ್ಟಿನಿಂದ ಬಂದು ನನ್ನ ಕೆನ್ನೆಗೆ ಬಾರಿಸಿದರು'' ಎಂದು ಆರೋಪಿ ವಿಚಾರಣೆಯಲ್ಲಿ ಹೇಳಿದ್ದಾನೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮೋಲ್ ಲಕ್ಷ್ಮಣರಾವ್ ಘೋಡ್ಕೆ ತಿಳಿಸಿದ್ದಾರೆ.
ಮುಂದುವರೆದು, ''ತಾಯಿ ಕೆನ್ನೆಗೆ ಬಾರಿಸಿದ ನಂತರ ನಾನು ಆಕೆಯನ್ನು ಗೋಡೆಗೆ ತಳ್ಳಿದೆ. ಇದರಿಂದ ಕುಸಿದು ಬಿದ್ದ ಆಕೆಯ ಕತ್ತು ಹಿಸುಕಿಸಿದೆ. ನಂತರ ಶವವನ್ನು ಫ್ಯಾನ್ಗೆ ನೇತು ಹಾಕಲು ಯತ್ನಿಸಿದೆ. ಆದರೆ, ಅಷ್ಟರಲ್ಲೇ ತಂದೆ ಮನೆಗೆ ಮರಳಿದರು. ಆಗ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಂದೆಗೆ ಸುಳ್ಳು ಹೇಳಿದೆ. ನಂತರ ಆಕೆಯನ್ನು ತಂದೆ ಆಸ್ಪತ್ರೆಗೆ ಸಾಗಿಸಿದರು'' ಎಂದು ಜಿಶಾನ್ ಬಾಯ್ಬಿಟ್ಟಿದ್ದಾನೆ ಅಂತಾ ಪೊಲೀಸ್ ಅಧಿಕಾರಿ ವಿವರಿಸಿದರು. ಇದೇ ವೇಳೆ ಕುಟುಂಬದವರು ಯಾರೂ ದೂರು ನೀಡಲು ಮುಂದಾಗದ ಕಾರಣ, ಪೊಲೀಸರ ಪರವಾಗಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಶೀಲ ಶಂಕಿಸಿ ಶಿಕ್ಷಕಿ ಪತ್ನಿಯ ಕೊಲೆಗೈದ ಶಿಕ್ಷಕ ಪತಿ