ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿಂದು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸದಸ್ಯರ ನಡುವೆ ಭಾರಿ ಕಿತ್ತಾಟ ನಡೆಯಿತು. ಸ್ಥಾಯಿ ಸಮಿತಿಯ ಸದಸ್ಯರ ಚುನಾವಣೆಯಲ್ಲಿ ಅಕ್ಷರಶಃ ರಣಾಂಗಣವೇ ಸೃಷ್ಟಿಯಾಯಿತು. ಪರಸ್ಪರ ನೂಕಾಟ, ತಳ್ಳಾಟ ಮಾಡಿದ್ದಷ್ಟೇ ಅಲ್ಲದೇ, ಸದಸ್ಯರೊಬ್ಬರನ್ನು ಕೆಳಗಡೆ ಹಾಕಿ ತುಳಿಯುತ್ತಿದ್ದ ದೃಶ್ಯವೂ ದೊರೆತಿದೆ. ಕೆನ್ನೆಗೆ ಏಟು, ಬಟ್ಟೆ ಮತ್ತು ಕೂದಲು ಹಿಡಿದು ಎಳೆದಾಟ, ಪಾಲಿಕೆಯ ಸಲಕರಣೆಗಳನ್ನೂ ಸದಸ್ಯರು ಪುಡಿಗಟ್ಟಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ 250 ಸದಸ್ಯ ಬಲದ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಪ್ 134 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು. ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ನಂತರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಭಾರಿ ಕರಸತ್ತು ನಡೆಸಲಾಗಿತ್ತು. ಜನವರಿಯಿಂದ ಮೂರು ಮೇಯರ್ ಚುನಾವಣೆಯು ಗದ್ದಲ, ಗಲಾಟೆ ಕಾರಣದಿಂದಲೇ ಮುಂದೂಡಿಕೆ ಆಗುತ್ತಲೇ ಬರುತ್ತಿತ್ತು.
ಕೊನೆಗೆ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಫೆ.22ರಂದು ಮೇಯರ್ ಚುನಾವಣೆ ನಡೆದಿದೆ. ಅದೇ ದಿನ ಸ್ಥಾಯಿ ಸಮಿತಿ ಚುನಾವಣೆಯೂ ನಡೆಯಬೇಕಿತ್ತು. 47 ಕೌನ್ಸಿಲರ್‌ಗಳು ಮತ ಚಲಾಯಿಸಿದ್ದರು. ಆದರೆ, ಇದರ ಮಧ್ಯೆ ಬಿಜೆಪಿ ಮತ್ತು ಆಪ್ ಸದಸ್ಯರ ನಡುವೆ ಪೆನ್ನು ಮತ್ತು ಮೊಬೈಲ್ ಕೊಂಡೊಯ್ಯುವ ವಿಚಾರದಲ್ಲಿ ಗಲಾಟೆ ಸೃಷ್ಟಿಯಾಗಿತ್ತು. ಇದಾದ ನಂತರ ಚುನಾವಣೆ ಪ್ರಕ್ರಿಯೆ ನಿಂತು ಹೋಯಿತು. ಅಲ್ಲಿಂದ ಸ್ಥಾಯಿ ಸಮಿತಿ ಚುನಾವಣೆ ನಡೆಸುವ ಕಸರತ್ತು ಮುಂದುವರೆದಿದೆ. ಇದೇ ವೇಳೆ ಸದನವನ್ನು 13 ಬಾರಿ ಮುಂದೂಡಲಾಗಿದೆ. ನಂತರ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಗುರುವಾರದ ಕಲಾಪವನ್ನು ಶುಕ್ರವಾರ ಬೆಳಗಿನ ಜಾವಕ್ಕೆ ಮುಂದೂಡಿಕೆ ಮಾಡಲಾಗಿತ್ತು.
ಒಂದು ಮತ ಅಸಿಂಧು:ಅಂತೆಯೇ, ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಸ್ಥಾಯಿ ಸಮಿತಿಯ 6 ಸದಸ್ಯರಿಗೆ ಮತದಾನ ನಡೆಯಿತು. 250 ಸದಸ್ಯ ಬಲದ ಎಂಸಿಡಿಯಲ್ಲಿ 8 ಕಾಂಗ್ರೆಸ್ ಕೌನ್ಸಿಲರ್‌ಗಳು ಗೈರು ಹಾಜರಾಗಿದ್ದರಿಂದ ಕೇವಲ 242 ಸದಸ್ಯರು ಮಾತ್ರ ಮತ ಚಲಾಯಿಸಿದರು. ಮತ ಎಣಿಕೆ ವೇಳೆ ಒಂದು ಮತ ಅಸಿಂಧುವಾದಾಗ ಬಿಜೆಪಿ ಕೌನ್ಸಿಲರ್‌ಗಳು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅಲ್ಲಿಂದ ಇಡೀ ರಣಾಂಗಣವಾಗಿ ಮಾರ್ಪಟ್ಟಿತು.