ನವದೆಹಲಿ:ನ್ಯಾಯ ಪಡೆಯುವಿಕೆ ಹಾದಿಯಲ್ಲಿರುವ ಅಡೆತಡೆಗಳನ್ನು ನಿವಾರಿಸುವುದೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಕಟ್ಟಕಡೆಯ ವ್ಯಕ್ತಿಯೂ ನ್ಯಾಯಾಂಗದಲ್ಲಿ ಒಳಗೊಳ್ಳಬೇಕು. ಆತ ನ್ಯಾಯ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ಸುಪ್ರೀಂ ಕೋರ್ಟ್ ಆವರಣದಲ್ಲಿ ಇಂದು (ಮಂಗಳವಾರ) ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ನಾನು ಭವಿಷ್ಯವನ್ನು ನೋಡುವಾಗ ನಾಗರಿಕರು ನ್ಯಾಯ ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸುವುದೇ ಭಾರತೀಯ ನ್ಯಾಯಾಂಗದ ಮುಂದಿರುವ ದೊಡ್ಡ ಸವಾಲು ಎಂದು ನಂಬುತ್ತೇನೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
''ನಾಗರಿಕರು ನ್ಯಾಯಾಲಯಗಳನ್ನು ಸಮೀಪಿಸದಂತೆ ತಡೆಯುವ ತೊಡಕುಗಳನ್ನು ತೊಡೆದುಹಾಕಬೇಕು. ನ್ಯಾಯ ವಿತರಿಸುವ ನ್ಯಾಯಾಲಯಗಳ ಸಾಮರ್ಥ್ಯದ ಮೇಲೆ ವಿಶ್ವಾಸವನ್ನು ಬೆಳೆಸಬೇಕು. ಈ ಕಾರ್ಯವಿಧಾನದ ಮೂಲಕ ನ್ಯಾಯದ ಪ್ರವೇಶವನ್ನು ಹೆಚ್ಚಿಸಬೇಕು. ನಮ್ಮ ನ್ಯಾಯಾಂಗದ ಭವಿಷ್ಯವು ಅಂತರ್ಗತವಾಗಿದೆ ಮತ್ತು ಕಟ್ಟಕಡೆಯ ವ್ಯಕ್ತಿಗೆ ತಲುಪುವಿಕೆಯನ್ನು ಖಚಿತಪಡಿಸಿಕೊಳ್ಳುವ ಮಾರ್ಗವನ್ನೂ ನಾವು ಹೊಂದಿದ್ದೇವೆ'' ಎಂದು ತಿಳಿಸಿದರು.
"ನಾವು ಆದ್ಯತೆಯ ಆಧಾರದ ಮೇಲೆ ನಮ್ಮ ನ್ಯಾಯಾಲಯದ ಮೂಲಸೌಕರ್ಯವನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ನ್ಯಾಯಾಂಗ ಮೂಲಸೌಕರ್ಯವನ್ನು ಆಧುನೀಕರಿಸಲು ಒತ್ತು ನೀಡುವುದು ಮುಖ್ಯ. ಕಾರ್ಯವಿಧಾನದ ಅಡೆತಡೆಗಳನ್ನು ನಿವಾರಿಸಲು ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು. ಇದರ ಭಾಗವಾಗಿ ನಾವು ಇ-ಕೋರ್ಟ್‌ಗಳ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದಕ್ಕೆ ಕೇಂದ್ರದಿಂದ 7,000 ಕೋಟಿ ರೂಪಾಯಿಗಳ ಅನುದಾನಕ್ಕೆ ಮಂಜೂರಾತಿ ದೊರೆತಿದೆ" ಎಂದು ವಿವರಿಸಿದರು.