ನವದೆಹಲಿ: ಸಂವಿಧಾನದ ಮೂಲರಚನೆ ಚರ್ಚಾಸ್ಪದವಾಗಿದೆ ಎಂದು ಸುಪ್ರಿಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ರಂಜನ್ ಗೊಗೊಯ್ ಅವರು ಹೇಳಿಕೆ ನೀಡಿದ ಒಂದು ದಿನದ ನಂತರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದೆದುರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯ ವೇಳೆ, ಅರ್ಜಿದಾರರಲ್ಲಿ ಒಬ್ಬರಾದ ಅಕ್ಬರ್ ಲೋನ್ ಪರವಾಗಿ ಸಿಬಲ್, ವಾದ ಮಂಡಿಸಿದರು. ಈ ಸಂದರ್ಭದಲ್ಲಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠಕ್ಕೆ, "ನಿಮ್ಮ ಗೌರವಾನ್ವಿತ ಸಹೋದ್ಯೋಗಿಗಳಲ್ಲಿ ಒಬ್ಬರು ವಾಸ್ತವವಾಗಿ ಮೂಲಭೂತ ರಚನೆಯ ಸಿದ್ಧಾಂತವೇ ಅನುಮಾನಾಸ್ಪದವಾಗಿದೆ. ಮೂಲಭೂತ ರಚನೆಯು ಸಂವಿಧಾನದ ಅತ್ಯಗತ್ಯ ಲಕ್ಷಣ. ಇದನ್ನು ಸಂಸತ್ತು ಬದಲಾವಣೆ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ ಎಂದು ಹೇಳಿದರು.
ಸಿಬಲ್ ಮಾತುಗಳಿಗೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ.ಚಂದ್ರಚೂಡ್, "ಸಿಬಲ್ ಅವರೇ, ನೀವು ಸಹೋದ್ಯೋಗಿಯೆಂದು ಉಲ್ಲೇಖಿಸುವಾಗ, ಪೀಠದಲ್ಲಿರುವ ಸಹೋದ್ಯೋಗಿಯನ್ನು ಉಲ್ಲೇಖಿಸಬೇಕು. ಯಾಕೆಂದರೆ ಒಮ್ಮೆ ನಾವು ನ್ಯಾಯಾಧೀಶರ ಸ್ಥಾನದಿಂದ ಕೆಳಗಿಳಿದ ಮೇಲೆ ನಮ್ಮ ಮಾತುಗಳು ಅಭಿಪ್ರಾಯಗಳಷ್ಟೇ ಆಗಿರುತ್ತವೆಯೇ ಹೊರತು ಪಾಲಿಸಲೇಬೇಕಾದ ವಾಸ್ತವಾಂಶ ಆಗಿರದು" ಸ್ಪಷ್ಟಪಡಿಸಿದರು.