ನವ ದೆಹಲಿ:ಸುಪ್ರೀಂ ಕೋರ್ಟ್ನಲ್ಲಿ ಶುಕ್ರವಾರ ಕುತೂಹಲಕರ ಪ್ರಸಂಗ ನಡೆಯಿತು. ಯೂಟ್ಯೂಬ್ನಲ್ಲಿ ಲೈಂಗಿಕ ಅಶ್ಲೀಲ ಜಾಹೀರಾತನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪರಿಹಾರ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅವರು ಕೊಟ್ಟಿರುವ ಕಾರಣ ತುಂಬಾ ತಮಾಷೆಯಾಗಿತ್ತು. ಆ ಜಾಹೀರಾತುಗಳು ನನ್ನನ್ನು ಅಧ್ಯಯನದಿಂದ ವಿಚಲಿತಗೊಳಿಸಿವೆ ಎಂದು ಅವರು ಹೇಳಿದ್ದರು.
ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿದಾರರು ಓದುತ್ತಿದ್ದು, ಅವರೇ ಖುದ್ದು ಹಾಜರಾಗಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 25,000 ರೂ. ದಂಡ ವಿಧಿಸಲಾಗಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಅಂತಹ ಜಾಹೀರಾತುಗಳನ್ನು ನೀವೇ ನೋಡಬೇಡಿ ಎಂದು ಕೋರ್ಟ್ ಅರ್ಜಿದಾರರಿಗೆ ಸಲಹೆ ನೀಡಿತು.
ಇದನ್ನೂ ಓದಿ:ಬಲವಂತದ ಧಾರ್ಮಿಕ ಮತಾಂತರ ನಿಷೇಧ; ಸುಪ್ರೀಂಕೋರ್ಟ್ಗೆ ಹೊಸ ಅರ್ಜಿ ಸಲ್ಲಿಕೆ
'ನೀವು ಜಾಹೀರಾತುಗಳನ್ನು ಇಷ್ಟಪಡದಿದ್ದರೆ ಅವುಗಳನ್ನು ನೋಡಬೇಡಿ' ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅರ್ಜಿದಾರರಿಗೆ ಸಲಹೆ ನೀಡಿದರು. ಅಲ್ಲದೇ ಮತ್ತೆ ಇಂತಹ ವಿಚಾರಗಳಿಗೆ ನ್ಯಾಯಾಲಯದ ಸಮಯ ವ್ಯರ್ಥ ಮಾಡದಂತೆಯೂ ನ್ಯಾಯಾಧೀಶರು ಎಚ್ಚರಿಸಿದರು. ಮೊದಲು ನ್ಯಾಯಾಧೀಶರು 1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ನಂತರ ಅದನ್ನು ಕಡಿಮೆ ಮಾಡಿದ್ದಾರೆ.
'ಮಾಫ್ ಕರ್ ದೀಜಿಯೇ (ನನ್ನನ್ನು ಕ್ಷಮಿಸಿ)' ಎಂದು ಅರ್ಜಿದಾರರು ಕ್ಷಮೆ ಕೇಳಿ, ದಂಡವನ್ನು ಕಡಿತಗೊಳಿಸುವಂತೆ ಕೋರಿದರು. 'ಕಾಸ್ಟ್ ಕಮ್ ಕರ್ದುಂಗಾ, ಲೆಕಿನ್ ಮಾಫ್ ನಹೀ ಕರುಂಗಾ (ದಂಡವನ್ನು ಕಡಿಮೆ ಮಾಡುತ್ತೇನೆ. ಆದರೆ ನಿಮ್ಮನ್ನು ಕ್ಷಮಿಸುವುದಿಲ್ಲ)' ಎಂದು ನ್ಯಾಯಮೂರ್ತಿ ಕೌಲ್ ಅರ್ಜಿದಾರರ ಕ್ಷಮೆಯನ್ನು ಪರಿಗಣಿಸಿ, ದಂಡವನ್ನು ಕಡಿಮೆ ಮಾಡುವುದಾಗಿ ಹೇಳಿದರು.