ನವದೆಹಲಿ:ಭಾರತ ಮೂಲದ ವಿಮಾನಯಾನ ಕಂಪನಿಗಳು ತಮ್ಮ ತಮ್ಮ ವಿಮಾನಗಳಲ್ಲಿ ವಿದೇಶಿ ಸಂಗೀತವನ್ನು ಹಾಕುವ ಬದಲಿಗೆ, ಭಾರತೀಯ ಸಂಗೀತವನ್ನು ಹಾಕಬೇಕೆಂದು ನಾಗರಿಕ ವಿಮಾನಯಾನ ಇಲಾಖೆಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಲಹೆ ಮಾಡಿದ್ದಾರೆ.
ಡಿಸೆಂಬರ್ 23ರಂದು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ICCR) ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳಿಗೆ ಭಾರತೀಯ ಸಂಗೀತವನ್ನು ಹಾಕಲು ಜ್ಯೋತಿರಾದಿತ್ಯ ಸಿಂಧಿಯಾ ಪರವಾಗಿ ವಿಮಾನಯಾನ ಸಚಿವಾಲಯ ಸಲಹೆ ನೀಡಿ, ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ.
ಎಲ್ಲಾ ರಾಷ್ಟ್ರಗಳ ಏರ್ಲೈನ್ಸ್ಗಳು ಆಯಾ ರಾಷ್ಟ್ರಗಳ ಸಂಗೀತವನ್ನು ಹಾಕುತ್ತವೆ. ಉದಾಹರಣೆಗೆ, ಅಮೆರಿಕದ ಏರ್‌ಲೈನ್‌ನಲ್ಲಿ ಜಾಝ್ ಅಥವಾ ಆಸ್ಟ್ರಿಯಾ ಏರ್‌ಲೈನ್‌ನಲ್ಲಿ ಮೊಜಾರ್ಟ್ ಮತ್ತು ಮಧ್ಯಪ್ರಾಚ್ಯದ ವಿಮಾನಯಾನ ಸಂಸ್ಥೆಯ ವಿಮಾನಗಳಲ್ಲಿ ಅರಬ್ ಸಂಗೀತವನ್ನು ಹಾಕುತ್ತಾರೆ. ನಮ್ಮ ಸಂಗೀತವು ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ ಮತ್ತು ಪ್ರತಿಯೊಬ್ಬ ಭಾರತೀಯನು ನಮ್ಮ ಸಂಗೀತದ ಬಗ್ಗೆ ಹೆಮ್ಮೆ ಪಡಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಮನವಿಯಂತೆ ಭಾರತೀಯ ವಿಮಾನಗಳಲ್ಲಿ, ಏರ್ಪೋರ್ಟ್ಗಳಲ್ಲಿ ಭಾರತೀಯ ಸಂಗೀತವನ್ನು ಹಾಕಲು ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತೇವೆ ಎಂದು ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಿಜಿಸಿಎ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ:ಡೀಸೆಲ್ ಖಾಲಿಯಾಗಿದ್ದಕ್ಕೆ ಟ್ರಕ್ ಚಾಲಕನ ಅಜಾಗರೂಕತೆ, ದುಸ್ಸಾಹಸ: ಮೂವರ ದುರ್ಮರಣ