ತಿರುವನಂತಪುರಂ (ಕೇರಳ) :ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ತಮ್ಮ ಸರ್ಕಾರ ಜಾರಿಗೆ ತರುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ.
ಎಲ್‌ಡಿಎಫ್ ಸರ್ಕಾರದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ನಮ್ಮ ಸರ್ಕಾರವು ಸ್ಪಷ್ಟ ನಿಲುವನ್ನು ಹೊಂದಿದೆ. ಅದು ಮುಂದುವರಿಯುತ್ತದೆ. ನಮ್ಮ ದೇಶವು ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಜಾತ್ಯಾತೀತ ತತ್ವದ ಮೇಲೆ ಕೆಲಸ ಮಾಡುತ್ತಿದೆ ಎಂದರು.
ಇಂದಿನ ದಿನಗಳಲ್ಲಿ ಜಾತ್ಯಾತೀತತೆಯನ್ನು ನಾಶಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಒಂದು ನಿರ್ದಿಷ್ಟ ಗುಂಪಿನ ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಘಟನೆಯಲ್ಲಿ ಒಂದು ಗುಂಪಿನ ಜನರು ಧರ್ಮದ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುತ್ತಿದ್ದಾರೆ. ಈ ಘಟನೆಯ ವಿರುದ್ಧ ಕೇರಳ ಸರ್ಕಾರವು ದೃಢವಾದ ನಿಲುವು ತೆಗೆದುಕೊಂಡಿದೆ ಅಂತಾ ಹೇಳಿದರು.
ಓದಿ:ಚುನಾವಣೆ ಸುಳ್ಳು ಭರವಸೆಗಳ ಮರೆಮಾಚಲು ಸಿಎಎ ಮತ್ತೆ ಮುನ್ನೆಲೆಗೆ: ಅಮಿತ್ ಶಾ ವಿರುದ್ಧ ಸಿಪಿಐಎಂ ಕಿಡಿ
ಜನರಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ದೇಶದ ವಿವಿಧ ಭಾಗಗಳಲ್ಲಿ ಹಲವಾರು ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಇಲ್ಲಿ ನಮ್ಮ ಸಮಾಜದ ಅತ್ಯಂತ ಬಡ ಕುಟುಂಬಗಳನ್ನು ಗುರುತಿಸಲು ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಈ ಸಮೀಕ್ಷೆಯ ಭಾಗವಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರುವುದಿಲ್ಲ. ಧರ್ಮದ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸಲಾಗುವುದಿಲ್ಲ ಎಂದು ರಾಜ್ಯ ಸರ್ಕಾರವು ದೃಢವಾದ ನಿಲುವನ್ನು ತೆಗೆದುಕೊಂಡಿದೆ ಎಂದು ವಿಜಯನ್ ಹೇಳಿದರು. ಕಳೆದ ತಿಂಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು.
ಡಿಸೆಂಬರ್ 11, 2019ರಂದು ಭಾರತದ ಸಂಸತ್ತು ಪೌರತ್ವ (ತಿದ್ದುಪಡಿ) ಕಾಯಿದೆ ಅಂಗೀಕರಿಸಿತ್ತು. ಸಿಎಎ ಜನವರಿ 10, 2020 ರಂದು ಜಾರಿಗೆ ಬಂದಿತು. ಇದು ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದವರು ಈ ಕಾಯಿದೆಯ ಲಾಭ ಪಡೆಯಲಿದ್ದಾರೆ.