ಕರ್ನಾಟಕ

karnataka

ETV Bharat / bharat

ಏರ್​ಪೋರ್ಟ್​​ನಲ್ಲಿ ಚೀನಾದ ಸ್ಯಾಟಲೈಟ್ ಫೋನ್​ನೊಂದಿಗೆ ಸಿಕ್ಕಿಬಿದ್ದ ಅಮೆರಿಕದ ಪ್ರಜೆ

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮೂವರು ಅಮೆರಿಕದ ಪ್ರಜೆಗಳ ಲಗೇಜ್​ನಲ್ಲಿ ಚೀನಾದ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ. ಈ ಸಂಬಂಧ ಓರ್ವ ವ್ಯಕ್ತಿಯನ್ನು ಸಿಐಎಸ್‌ಎಫ್ ಯೋಧರು ಬಂಧಿಸಿದ್ದಾರೆ.

cisf-arrests-american-citizen-with-chinese-satellite-phone-at-bagdogra
ಏರ್​ಪೋರ್ಟ್​​ನಲ್ಲಿ ಚೀನಾದ ಸ್ಯಾಟಲೈಟ್ ಫೋನ್​ನೊಂದಿಗೆ ಸಿಕ್ಕಿ ಬಿದ್ದ ಅಮೆರಿಕದ ಪ್ರಜೆ

By

Published : Jan 21, 2023, 5:13 PM IST

Updated : Jan 21, 2023, 5:37 PM IST

ಏರ್​ಪೋರ್ಟ್​​ನಲ್ಲಿ ಚೀನಾದ ಸ್ಯಾಟಲೈಟ್ ಫೋನ್​ನೊಂದಿಗೆ ಸಿಕ್ಕಿಬಿದ್ದ ಅಮೆರಿಕದ ಪ್ರಜೆ

ಸಿಲಿಗುರಿ (ಪಶ್ಚಿಮ ಬಂಗಾಳ): ಅಮೆರಿಕ ಪ್ರಜೆಯೊಬ್ಬ ಚೀನಾದ ಸ್ಯಾಟಲೈಟ್ ಫೋನ್​ (ಉಪಗ್ರಹ ಫೋನ್) ಹೊತ್ತೊಯ್ಯುತ್ತಿದ್ದ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಕೇಂದ್ರ ಭಾರತೀಯ ಭದ್ರತಾ ಪಡೆ (ಸಿಐಎಸ್‌ಎಫ್) ಯೋಧರು ಆತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಮೆರಿಕದ ನಿವಾಸಿ ಥಾಮಸ್ ಎಸ್ರೋಹ್ ಸೀಟ್ಜ್ (45) ಎಂದು ಗುರುತಿಸಲಾಗಿದೆ.

ಥಾಮಸ್ ಎಸ್ರೋಹ್ ಸೀಟ್ಜ್ ಸೇರಿದಂತೆ ಮೂವರು ಅಮೆರಿಕದ ಪ್ರಜೆಗಳು ದೆಹಲಿ ವಿಮಾನ ಹಿಡಿಯಲು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಯೋಧರು ಈ ಮೂವರು ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸಿದ್ದಾರೆ. ಆಗ ಒಂದು ಬ್ಯಾಗೇಜ್‌ನ ಒಳಗೆ ಚೀನಾ ಕಂಪನಿಯ ಇರಿಡಿಯಮ್ ಎಂಬ ಸ್ಯಾಟಲೈಟ್ ಫೋನ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.

ಅಮೆರಿಕದ ಪ್ರಜೆ ಬಳಿ ಪತ್ತೆಯಾದ ಚೀನಾದ ಸ್ಯಾಟಲೈಟ್ ಫೋನ್

ಚೀನಾದ ಸ್ಯಾಟಲೈಟ್ ಫೋನ್ ಪತ್ತೆಯಾದ ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಅಮೆರಿಕ ಪ್ರಜೆಗಳನ್ನು ಕೇಳಿದ್ದಾರೆ. ಆದರೆ, ಈ ವಿದೇಶಿಗರು ಸ್ಯಾಟಲೈಟ್ ಫೋನ್ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಆದ್ದರಿಂದ ಸಿಐಎಸ್ಎಫ್ ಯೋಧರು ಥಾಮಸ್ ಎಸ್ರೋಹ್ ಸೀಟ್ಜ್​​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಯಾಟಲೈಟ್ ಫೋನ್ ಪೂರೈಕೆ ಕಂಪನಿಯಲ್ಲಿ ಕೆಲಸ:ಸ್ಯಾಟಲೈಟ್ ಫೋನ್ ಬಗ್ಗೆ ಸಿಐಎಸ್ಎಫ್ ಯೋಧರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಅಮೆರಿಕದ ಪ್ರಜೆಗೆಳು ಜನವರಿ 12ರಂದು ಭಾರತಕ್ಕೆ ಬಂದಿದ್ದಾರೆ. ಅಮೆರಿಕದ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಥಾಮಸ್ ಎಸ್ರೋಹ್ ಸೀಟ್ಜ್ ಕೆಲಸ ಮಾಡುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ಈ ಕಂಪನಿಯು ಕಾರ್ಗೋ ಮೂಲಕ ಸ್ಯಾಟಲೈಟ್ ಫೋನ್ ಪೂರೈಕೆದಾರರಾಗಿ ಕಾರ್ಯನಿರ್ವಹಿಸುತ್ತದೆ. ಬಂಧಿತ ಥಾಮಸ್ ಎಸ್ರೋಹ್ ಸೀಟ್ಜ್ ಜನವರಿ 16ರಂದು ಈ ಸ್ಯಾಟಲೈಟ್ ಫೋನ್ ಸಂಗ್ರಹಿಸಿದ್ದಾನೆ. ಸೇನೆಯ ಡ್ರೋನ್ ತರಬೇತಿಗಾಗಿ ಅಮೆರಿಕದ ಕಂಪನಿಯ ಮೂವರು ಸದಸ್ಯರು ಸಿಕ್ಕಿಂನ ಲಾಚುಂಗ್‌ಗೆ ತೆರಳಿದ್ದರು ಎಂದೂ ತಿಳಿದ ಬಂದಿದೆ.

ಡ್ರೋನ್ ತರಬೇತಿಗೆ ಬಂದಿದ್ದರಾ?: ಈ ಘಟನೆ ಬಗ್ಗೆ ಬಾಗ್ಡೋಗ್ರಾ ಪೊಲೀಸ್ ಠಾಣೆಯ ಅಧಿಕಾರಿ ನಿರ್ಮಲ್ ದಾಸ್ ಪ್ರತಿಕ್ರಿಯಿಸಿದ್ದು, ಚೀನಾದ ಸ್ಯಾಟಲೈಟ್ ಫೋನ್​ ಸಾಗಾಟ ಸಂಬಂಧ ಅಮೆರಿಕದ ಪ್ರಜೆ ಥಾಮಸ್ ಎಸ್ರೋಹ್ ಸೀಟ್ಜ್​​ ಎಂಬಾತನನ್ನು ಬಂಧಿಸಿರುವುದು ನಿಜ. ಈ ಬಗ್ಗೆ ಹೆಚ್ಚಿನ ತನಿಖೆ ಸಹ ನಡೆಸಲಾಗುತ್ತಿದೆ. ಈ ಎಸ್ರೋಹ್ ಸೀಟ್ಜ್ ಭಾರತಕ್ಕೆ ಗೂಢಚಾರಿಕೆಯಾಗಿ ಬಂದಿದ್ದಾನೋ ಅಥವಾ ಸೇನೆಗೆ ಡ್ರೋನ್‌ಗಳ ತರಬೇತಿ ನೀಡಲು ಬಂದಿದ್ದಾನೋ ಎಂಬುದನ್ನು ಪತ್ತೆ ಹಚ್ಚಲು ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದಡೆ ಸೇನಾ ಮೂಲಗಳ ಪ್ರಕಾರ, ಅಮೆರಿಕದ ಶೀಲ್ಡ್ ಎಐ ಕಂಪನಿ ಮತ್ತು ಜೆಎಸ್‌ಡಬ್ಲ್ಯು ಎಂಬ ಭಾರತೀಯ ಕಂಪನಿ ಜಂಟಿಯಾಗಿ ಭಾರತೀಯ ಸೇನೆಗೆ ಡ್ರೋನ್ ತರಬೇತಿ ಕಾರ್ಯದಲ್ಲಿ ತೊಡಗಿವೆ. ಇದರಲ್ಲಿ ತಾವು ಕೆಲಸ ಮಾಡುತ್ತಿರುವುದಾಗಿ ಈ ಅಮೆರಿಕ ಪ್ರಜೆಗಳು ಹೇಳಿಕೊಂಡಿದ್ದಾರೆ. ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಡ್ರೋನ್‌ಗಳ ಸಹಾಯದಿಂದ ಉತ್ತಮ ಗುಣಮಟ್ಟದ ಕಣ್ಗಾವಲು ಹೇಗೆ ನಡೆಸುವುದು ಎಂಬುದರ ಕುರಿತು ತರಬೇತಿ ನೀಡಲು ಅಮೆರಿಕದ ಪ್ರಜೆಗಳು ಭಾರತಕ್ಕೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಭಾರತ - ಚೀನಾ ಗಡಿಯಲ್ಲಿ ‘ಪ್ರಳಯ್​’.. ಬಾರ್ಡರ್​ನಲ್ಲಿ ದೇಶದ ಸೇನೆಯಿಂದ ಸಮರಾಭ್ಯಾಸ

ಆದರೆ, ಶುಕ್ರವಾರ ತರಬೇತಿ ಮುಗಿಸಿ ದೆಹಲಿಗೆ ವಿಮಾನ ಹಿಡಿಯಲು ಬಾಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ಈ ಮೂವರು ಬಂದಿದ್ದರು. ಈ ವೇಳೆ ಭಾರತದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್‌ನೊಂದಿಗೆ ಸಿಕ್ಕಿಬಿದ್ದ ಕಾರಣಕ್ಕೆ ಥಾಮಸ್ ಎಸ್ರೋಹ್ ಸೀಟ್ಜ್ ಬಂಧಿಸಲಾಗಿದೆ. ಅಲ್ಲದೇ, ಬಂಧಿತನ ಪಾಸ್‌ಪೋರ್ಟ್ ಹಾಗೂ ವೀಸಾವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಶನಿವಾರ ಬಾಗ್ಡೋಗ್ರಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಭಾರತೀಯ ವೈರ್‌ಲೆಸ್ ಮತ್ತು ಟೆಲಿಗ್ರಾಫ್ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಅಮೆರಿಕ ಪ್ರಜೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಅಮೆರಿಕದ ಪ್ರಜೆಯ ಪಾಸ್‌ಪೋರ್ಟ್ ಮುಟ್ಟುಗೋಲು

ಇನ್ನು, ಭಾರತದಲ್ಲಿ ಸಾಮಾನ್ಯ ಜನರಿಗೆ ಇಂತಹ ಫೋನ್‌ಗಳ ಬಳಕೆಗೆ ಸಂಪೂರ್ಣವಾಗಿ ನಿಷೇಧವಿದೆ. ಇದೇ ವೇಳೆ ನಾಗರಿಕ ವಿಮಾನಯಾನ ನಿಯಮಗಳ ಪ್ರಕಾರ, ಬಿಎಸ್​ಎನ್​ಎಲ್​ನ ಸ್ಯಾಟಲೈಟ್ ಫೋನ್ ಹೊರತುಪಡಿಸಿ ಯಾವುದೇ ಕಂಪನಿಯ ಫೋನ್‌ನೊಂದಿಗೆ ಭಾರತೀಯ ವಿಮಾನಗಳಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾಬೋಧಿ ದೇಗುಲದಲ್ಲಿ 10 ಎಂಎಲ್​ ಮದ್ಯ ಹೊಂದಿದ್ದ ವಿದೇಶಿ ಬೌದ್ಧ ಸನ್ಯಾಸಿಯ ಬಂಧನ

Last Updated : Jan 21, 2023, 5:37 PM IST

ABOUT THE AUTHOR

...view details