ಜೋಧಪುರ (ರಾಜಸ್ಥಾನ): ಕೆಲ ವರ್ಷಗಳ ಹಿಂದೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಿನೆರಿಯಸ್ ಜಾತಿಯ ರಣಹದ್ದನ್ನು ಗುರುವಾರ ಚೆನ್ನೈನಿಂದ ರಾಜಸ್ಥಾನದ ಜೋಧಪುರಕ್ಕೆ ಏರ್ಲಿಫ್ಟ್ ಮಾಡಲಾಗಿದೆ. ಇಲ್ಲಿನ ಮಾಚಿಯಾ ಬಯೋಲಾಜಿಕಲ್ ಪಾರ್ಕ್‌ಗೆ ರಣಹದ್ದು ಸ್ಥಳಾಂತರಿಸಲಾಗಿದೆ.
ಐದು ವರ್ಷಗಳ ಹಿಂದೆ ಈ ರಣಹದ್ದು ತನ್ನ ಗುಂಪಿನಿಂದ ಬೇರ್ಪಟ್ಟಿತ್ತು. ತಮಿಳುನಾಡಿನ ಕನ್ಯಾಕುಮಾರಿ ಬಳಿಯ ಉದಯಗಿರಿಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಅದು ಪತ್ತೆಯಾಗಿತ್ತು. ನಂತರ ಅದನ್ನು ರಕ್ಷಣೆ ಮಾಡಿ ಉದಯಗಿರಿಯ ಪಾರ್ಕ್‌ಗೆ ತಂದು ಚಿಕಿತ್ಸೆ ನೀಡಿ ಆರೈಕೆ ಮಾಡಲಾಗಿತ್ತು. ಇದೀಗ ರಣಹದ್ದು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರಿಂದ ಜೋಧಪುರಕ್ಕೆ ಏರ್ ಇಂಡಿಯಾ ವಿಮಾನದ ಮೂಲಕ ಏರ್ಲಿಫ್ಟ್ ಮಾಡಲಾಗಿದೆ.
ರಣಹದ್ದಿಗೆ ಚಂಡಮಾರುತದ ಹೆಸರು:ವಲಸಿಗ ಸಿನೆರಿಯಸ್ ರಣಹದ್ದು 2017ರಲ್ಲಿ ಉಂಟಾದ ಓಖಿ ಚಂಡಮಾರುತದಲ್ಲಿ ತೀರವಾಗಿ ಗಾಯಗೊಂಡಿತ್ತು. ಅಲ್ಲಿಂದ ಈ ರಣಹದ್ದಿಗೆ ಹಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ಓಖಿ ಚಂಡಮಾರುತದ ಸಂದರ್ಭದಲ್ಲಿ ಉದಯಗಿರಿಯಲ್ಲಿ ಈ ರಣಹದ್ದು ಪತ್ತೆಯಾಗಿದ್ದರಿಂದ ಇದಕ್ಕೆ ಓಖಿ ಎಂದೇ ತಮಿಳುನಾಡು ವನ್ಯಜೀವಿ ಅಧಿಕಾರಿಗಳು ಹೆಸರಿಟ್ಟಿದ್ದರು.
ಜೋಧಪುರಕ್ಕೆ ಯಾಕೆ ಸ್ಥಳಾಂತರ?: ಸಿನೆರಿಯಸ್ ಜಾತಿಯ ರಣಹದ್ದುಗಳು ಸ್ಪೇನ್, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್ನಲ್ಲಿ ಕಂಡುಬರುತ್ತದೆ. ಪೋರ್ಚುಗಲ್, ಫ್ರಾನ್ಸ್‌ನಿಂದ ಉಜ್ಬೇಕಿಸ್ತಾನ್, ಮಂಗೋಲಿಯಾ ಮೂಲಕ ಅಕ್ಟೋಬರ್ ತಿಂಗಳಿನಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಇವುಗಳ ಆವಾಸಸ್ಥಾನವು ಅರಣ್ಯ ಪ್ರದೇಶದ ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳಾಗಿವೆ.
ಜೋಧಪುರದಲ್ಲಿ ಸಿನೆರಿಯಸ್ ರಣಹದ್ದುಗಳು ಇದ್ದು, ಅವುಗಳಿಗೆ ಬೇಕಾದ ಆಧಾರದ ಲಭ್ಯತೆಯೂ ಜೋಧಪುರದಲ್ಲಿದೆ. ಆದ್ದರಿಂದ ಈ ರಣಹದ್ದನ್ನು ತಮಿಳುನಾಡಿನಿಂದ ಜೋಧಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ರಣಹದ್ದು ಜೊತೆಗೆ ಕನ್ಯಾಕುಮಾರಿಯ ವನ್ಯಜೀವಿ ಅಧಿಕಾರಿಯೂ ಜೋಧಪುರಕ್ಕೆ ಬಂದಿದ್ದಾರೆ.