ನವದೆಹಲಿ : ಚಲನಚಿತ್ರ ಪೈರಸಿಯನ್ನು ತಡೆಗಟ್ಟುವ ಮತ್ತು ದೂರದರ್ಶನ ಅಥವಾ ಇತರ ಮಾಧ್ಯಮಗಳಲ್ಲಿ ಪ್ರದರ್ಶನವಾಗುವ ಚಲನಚಿತ್ರಗಳಿಗೆ ಪ್ರತ್ಯೇಕ ಪ್ರಮಾಣಪತ್ರಗಳನ್ನು ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಹೆಚ್ಚಿನ ಅಧಿಕಾರವನ್ನು ನೀಡುವ ಉದ್ದೇಶ ಹೊಂದಿರುವ ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023 ಅನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ.
ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿ ಮತ್ತು ಪ್ರತಿಕ್ರಿಯೆಯನ್ನು ಕೋರಿ ಪ್ರತಿಪಕ್ಷಗಳು ಸದನದ ಬಾವಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಅರ್ಧ ಗಂಟೆಯೊಳಗೆ ಸಂಕ್ಷಿಪ್ತ ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಸಭಾಪತಿ ಕಿರಿತ್ ಸೋಲಂಕಿ ಅವರು ಮಸೂದೆ ಅಂಗೀಕಾರದ ನಂತರ ಸದನವನ್ನು ಮರುದಿನಕ್ಕೆ ಮುಂದೂಡಿದರು. ಮಸೂದೆಯು ಸಿನಿಮಾಟೋಗ್ರಾಫ್ ಕಾಯಿದೆ, 1952ಕ್ಕೆ ತಿದ್ದುಪಡಿ ತರಲಿದೆ. ಈ ಮಸೂದೆಯನ್ನು ರಾಜ್ಯಸಭೆ ಕಳೆದ ವಾರ ಅಂಗೀಕರಿಸಿತ್ತು.
ಲೋಕಸಭೆಯಲ್ಲಿ ಮಸೂದೆಯನ್ನು ಮಂಡನೆ ಮಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಭಾರತವು ವಿಶ್ವದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಯಾಗಿದೆ. ಇಲ್ಲಿ ಹೆಚ್ಚಿನ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ. "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರ ಮತ್ತು "ಆರ್ ಆರ್ ಆರ್" ನಂತಹ ದಕ್ಷಿಣ ಭಾರತೀಯ ಚಲನಚಿತ್ರಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಹೆಸರು ಮಾಡಿವೆ ಮತ್ತು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಇದು ವಿಶ್ವ ಚಿತ್ರರಂಗದಲ್ಲಿ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಹೇಳಿದರು.