ಮುಂಬೈ (ಮಹಾರಾಷ್ಟ್ರ):ಚೀನಾದ ಬೆಂಬಲದಿಂದ ಭಾರತದ ವಿರುದ್ಧ ತೊಡೆತಟ್ಟಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡದಂತೆ ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯೂಎ) ಭಾರತೀಯ ಚಲನಚಿತ್ರೋದ್ಯಮಕ್ಕೆ ಮನವಿ ಮಾಡಿದೆ.
ಎಐಸಿಡಬ್ಲ್ಯುಎ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ಮಾಲ್ಡೀವ್ಸ್ ಸರ್ಕಾರವು ಮಾರ್ಚ್ 15 ರೊಳಗೆ ಭಾರತೀಯ ಸೇನೆಯನ್ನು ತನ್ನ ದೇಶದಿಂದ ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಕೇಳಿದೆ. ಕೆಲವು ದಿನಗಳ ಹಿಂದಷ್ಟೇ, ಮಾಲ್ಡೀವ್ಸ್ನ ಮೂವರು ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಇದರ ನಂತರ, 'ಮಾಲ್ಡೀವ್ಸ್ ಬಾಯ್ಕಾಟ್' ಅಭಿಯಾನ ಶುರುವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದ್ವೀಪರಾಷ್ಟ್ರದಲ್ಲಿ ಭಾರತೀಯ ಸಿನಿಮಾಗಳ ಚಿತ್ರೀಕರಣ ಮಾಡಬಾರದು ಎಂದು ಅವರು ಹೇಳಿದ್ದಾರೆ.
ಭಾರತದ ವಿರುದ್ಧವೇ ಸಡ್ಡು ಹೊಡೆದಿರುವ ಮಾಲ್ಡೀವ್ಸ್‌ಗೆ ತಕ್ಕಪಾಠ ಕಲಿಸಲು ಅಲ್ಲಿ ಚಿತ್ರೀಕರಣ ಮಾಡಬಾರದು. ತಾರೆಯರು ಸೇರಿದಂತೆ ಯಾರೂ ತಮ್ಮ ರಜಾದಿನಗಳಿಗಾಗಿ ಮಾಲ್ಡೀವ್ಸ್‌ಗೆ ಹೋಗಬಾರದು ಎಂದು ಶ್ಯಾಮಲಾಲ್ ಕೋರಿದ್ದಾರೆ.
ಮೋದಿ, ಭಾರತ ಟೀಕಿಸಿದ್ದ ಮಾಲ್ಡೀವ್ಸ್ ಸಚಿವರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಅಲ್ಲಿನ ಸುಂದರ ತಾಣದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಕುರಿತು ಮಾಲ್ಡೀವ್ಸ್ನ ಮೂವರು ಸಚಿವರಾದ ಮಲ್ಶಾ ಷರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಜೂಮ್ ಮಜೀದ್ ಆಕ್ಷೇಪಾರ್ಹ ಹೇಳಿಕೆಗಳುಳ್ಳ ಪೋಸ್ಟ್ ಮಾಡಿದ್ದರು. ಇದು ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಲು ಕಾರಣವಾಯಿತು.
ಮಾಲ್ಡೀವ್ಸ್ ಬಾಯ್ಕಾಟ್ ಅಭಿಯಾನ:ಪ್ರವಾಸೋದ್ಯಮವೇ ಆರ್ಥಿಕ ಮೂಲವಾಗಿರುವ ಮಾಲ್ಡೀವ್ಸ್‌ಗೆ ಭಾರತೀಯರು ಬಾಯ್ಕಾಟ್ ಹೇಳಿದ್ದಾರೆ. ಇದು ದ್ವೀಪರಾಷ್ಟ್ರದಲ್ಲಿ ಸರ್ಕಾರದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಲ್ಲಿನ ಮಾಜಿ ಸಚಿವರು, ಅಧ್ಯಕ್ಷರು, ಉಪಾಧ್ಯಕ್ಷರು ಸಚಿವರ ಹೇಳಿಕೆಗಳನ್ನು ಟೀಕಿಸಿದ್ದರು.
ಬಿಕ್ಕಟ್ಟಿನ ಮಧ್ಯೆ ಚೀನಾ ಪ್ರವಾಸ ಕೈಗೊಂಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾರ್ಚ್ 15 ರೊಳಗೆ ಭಾರತೀಯ ಸೈನಿಕರನ್ನು ದ್ವೀಪ ರಾಷ್ಟ್ರದಿಂದ ವಾಪಸ್ ಕರೆಯಿಸಿಕೊಳ್ಳುವಂತೆ ಭಾರತ ಸರ್ಕಾರವನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. ಚುನಾವಣೆಗೂ ಮೊದಲು ಮಾಲ್ಡೀವ್ಸ್‌ನಲ್ಲಿ ಭಾರತೀಯ ಪಡೆಗಳನ್ನು ಹಿಂದಕ್ಕೆ ಕಳುಹಿಸಲಾಗುವುದು ಎಂಬ ಅಭಿಯಾನ ನಡೆಸಲಾಗಿತ್ತು. ಡಾರ್ನಿಯರ್ 228 ಕಡಲ ಗಸ್ತು ವಿಮಾನ ಮತ್ತು ಎರಡು ಹೆಚ್ಎಎಲ್ ಧ್ರುವ ಹೆಲಿಕಾಪ್ಟರ್‌ಗಳೊಂದಿಗೆ 70 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ.
ಇದನ್ನೂ ಓದಿ:ಮಾಲ್ಡೀವ್ಸ್ ಟಿಕೆಟ್ ರದ್ದುಗೊಳಿಸಿ, ಲಕ್ಷದ್ವೀಪ ಪ್ರವಾಸ ಕೈಗೊಂಡ ನಟ ನಾಗಾರ್ಜುನ