ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹಣದುಬ್ಬರ ಎಲ್ಲರಿಗೂ ಕಳವಳ ಮೂಡಿಸುತ್ತಿರುವ ವಿಷಯವಾಗಿದೆ. ಕಳೆದ ಹಲವು ವಾರಗಳಿಂದ ಭಾರತದಲ್ಲಿ ಹಣದುಬ್ಬರದ ದರವು ಶೇಕಡಾ 6 ಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಹೂಡಿಕೆದಾರರು ಹಣದುಬ್ಬರಕ್ಕಿಂತ ಹೆಚ್ಚಿನ ಆದಾಯವನ್ನು ತರುವ ಹೂಡಿಕೆ ವಿಧಾನಗಳನ್ನು ಹುಡುಕಬೇಕು. ಆಗ ಮಾತ್ರ ಅವರು ಭವಿಷ್ಯದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳಬಹುದು.
ತಕ್ಷಣಕ್ಕೆ ಅಲ್ಪ ಲಾಭ ನೋಡಬೇಡಿ:ತಕ್ಷಣದ ಆದಾಯವನ್ನು ತರುವ ಎಲ್ಲ ರೀತಿಯ ಹೂಡಿಕೆ ವಿಧಾನಗಳಲ್ಲಿ ಹೂಡಿಕೆ ಮಾಡುವುದು ಜನತೆಯ ಸಾಮಾನ್ಯ ಪ್ರವೃತ್ತಿಯಾಗಿದೆ. ಅನೇಕ ಜನರು ದೀರ್ಘಾವಧಿಯ ಆದಾಯಕ್ಕಿಂತ ಹೆಚ್ಚಾಗಿ ಅಲ್ಪಾವಧಿಯ ಲಾಭಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ. ಆದರೆ, ಇದು ಅಂತಿಮವಾಗಿ ದುರ್ಬಲ ಬಂಡವಾಳ ಹೂಡಿಕೆಗೆ ಕಾರಣವಾಗುತ್ತದೆ.
ಹಣದುಬ್ಬರವನ್ನು ತಡೆದುಕೊಳ್ಳುವ ಹೂಡಿಕೆಗಳ ಪಾಲಿಸಿಗಳನ್ನು ಆಯ್ಕೆ ಮಾಡಲು ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ. ಆದರೆ, ನಮ್ಮ ಹೂಡಿಕೆಯ ಮೇಲೆ ಹಣದುಬ್ಬರದ ಪ್ರಭಾವ ತಡೆಯಲು ಕೆಲವು ವಿಧಾನಗಳನ್ನು ಅನುಸರಿಸಿದರೆ ಅಷ್ಟರಮಟ್ಟಿಗೆ ನಾವು ಸೇಫ್ ಆಗಬಹುದು.
ವಿವಿಧ ವಿಭಾಗಗಳಲ್ಲಿ ಹಣ ತೊಡಗಿಸಿ:ವಿವಿಧ ರೀತಿಯಲ್ಲಿ ಹೂಡಿಕೆ ಮಾಡುವುದು ಅಂದರೆ ವೈವಿಧ್ಯಮಯವಾಗಿ ಹೂಡಿಕೆ ಮಾಡುವುದು ಹಣದುಬ್ಬರ ಎದುರಿಸಲು ಇರುವ ಖಚಿತವಾದ ಮಾರ್ಗವಾಗಿದೆ. ಬೆಲೆ ಏರಿಕೆಯ ಪರಿಣಾಮವು ಪ್ರತಿಯೊಂದು ಪಾಲಿಸಿಗೂ ಬದಲಾಗುತ್ತಿರುತ್ತದೆ. ಹೂಡಿಕೆದಾರರು ಇದನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿನ ಏರಿಳಿತದ ಸಮಯದಲ್ಲಿ, ವಿವಿಧ ರೀತಿಯ ಹೂಡಿಕೆಗಳನ್ನು ಆಯ್ಕೆ ಮಾಡುವ ಮೂಲಕ ಅಪಾಯದ ಅಂಶವನ್ನು ಕಡಿಮೆ ಮಾಡಬಹುದು. ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗದೆ, ವಿವಿಧ ದೇಶಗಳ ಮಾರುಕಟ್ಟೆಗಳಲ್ಲಿ ಹಣ ಹೂಡುವುದು ಸೂಕ್ತ.
ಹೆಚ್ಚಿನ ರಿಸ್ಕ್ ಫ್ಯಾಕ್ಟರ್ ಹೊಂದಿರುವ ಯೋಜನೆಗಳು ಎಲ್ಲರಿಗೂ ಸರಿ ಹೊಂದಲ್ಲ:ಯಾವುದೇ ಹೂಡಿಕೆಯು ಹಣದುಬ್ಬರದ ಒತ್ತಡದ ಹೊರತಾಗಿಯೂ ಒಂದಿಷ್ಟು ಗಣನೀಯ ಆದಾಯ ನೀಡುವ ರೀತಿಯಲ್ಲಿ ಇರಬೇಕು. ಅದೇ ಸಮಯದಲ್ಲಿ, ಹೂಡಿಕೆದಾರರು ಅಪಾಯ ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಮತ್ತು ಅದರ ಪ್ರಕಾರ ಹಣಕಾಸಿನ ಯೋಜನೆಗಳನ್ನು ಮಾಡಬೇಕು. ಹೆಚ್ಚಿನ ರಿಸ್ಕ್ ಫ್ಯಾಕ್ಟರ್ ಹೊಂದಿರುವ ಯೋಜನೆಗಳು ಎಲ್ಲ ಜನರಿಗೆ ಸರಿ ಹೊಂದುವುದಿಲ್ಲ ಎಂಬುದು ಗೊತ್ತಿರಲಿ.