ಪಾಟ್ನಾ: ಎಲ್‌ಜೆಪಿ ನಾಯಕತ್ವದ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ, ಎಲ್‌ಜೆಪಿ ಸಂಸ್ಥಾಪಕ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಮುಂದಿನ ಕಾರ್ಯತಂತ್ರ ಕುರಿತ ಆಡಿಯೋವೊಂದು ಸೋರಿಕೆಯಾಗಿದ್ದು, ಭಾರೀ ವೈರಲ್ ಆಗ್ತಿದೆ.
ಚಿರಾಗ್ ಪಾಸ್ವಾನ್ ಮತ್ತು ಎಲ್‌ಜೆಪಿ ಯುವ ಘಟಕದ ನಾಯಕ ಸಂಜೀವ್ ಸರ್ದಾರ್ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬುಧವಾರ ಪಶುಪತಿ ಕುಮಾರ್ ಪಾರಸ್ ಪಾಟ್ನಾಕ್ಕೆ ಆಗಮಿಸಿದಾಗ ವಿಮಾನ ನಿಲ್ದಾಣ ಎದುರು ಹಾಗೂ ಪಕ್ಷದ ಕಚೇರಿ ಬಳಿ ಭಾರೀ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಆಗ ಮಧ್ಯಪ್ರವೇಶಿಸುವ ಸಂಜೀವ್ ಸರ್ದಾರ್, ಪಶುಪತಿ ಅವರು ಎಲ್‌ಜೆಪಿ ಕಚೇರಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಪಾರಸ್ ವಿರುದ್ಧದ ಪ್ರತಿಭಟನೆಗೆ ಪಾಟ್ನಾದಲ್ಲಿರುವ ದಲಿತ ಹಾಸ್ಟೆಲ್‌ಗಳಿಂದ ಯುವಕರನ್ನು ವ್ಯವಸ್ಥೆಗೊಳಿಸುವುದಾಗಿ ಸರ್ದಾರ್ ಹೇಳಿರುವುದು ಆಡಿಯೋದಲ್ಲಿ ಇದೆ. ಆದರೆ ವೈರಲ್ ಆಡಿಯೋ ಕ್ಲಿಪ್‌ನ ಸತ್ಯಾಸತ್ಯತೆ ದೃಢಪಟ್ಟಿಲ್ಲ.
ಇದನ್ನೂ ಓದಿ: ಮಾರಕ ಡೆಲ್ಟಾ ರೂಪಾಂತರಿ ಭೀತಿ: ಯುಎಸ್ ಪ್ರಜೆಗಳು ಲಸಿಕೆ ಪಡೆಯುವಂತೆ ಅಧ್ಯಕ್ಷ ಬೈಡನ್ ಕರೆ
ಗುರುವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಸಂಸದ, ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್, ಬುಧವಾರ ದೆಹಲಿಯಿಂದ ಆಗಮಿಸಿದರು. ನಂತರ ಸೋದರಳಿಯ ಪ್ರಿನ್ಸ್ ರಾಜ್ ಸೇರಿ ಐವರು ಸಂಸದರ ಬೆಂಬಲದೊಂದಿಗೆ ಪಾರಸ್ ಎಲ್‌ಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು. ಕಳೆದ ವಾರವೇ ಪಶುಪತಿ ಮತ್ತು ಸೋದರ ಸಂಬಂಧಿ ಪ್ರಿನ್ಸ್ ರಾಜ್ ಸೇರಿದಂತೆ ತಮ್ಮ ಪಕ್ಷದ ಐವರು ಲೋಕಸಭಾ ಸಂಸದರು ಚಿರಾಗ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಮಂಗಳವಾರ ತುರ್ತು ಸಭೆ ನಡೆಸಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್‌ರನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದರು. ಜೊತೆಗೆ ಲೋಕಸಭೆಯಲ್ಲಿ ಎಲ್‌ಜೆಪಿ ನಾಯಕ ಸ್ಥಾನದಿಂದಲೂ ಪಾಸ್ವಾನ್ ಅವರನ್ನು ಕೆಳಗಿಳಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಚಿರಾಗ್ ಪಾಸ್ವಾನ್, ರಾಷ್ಟ್ರೀಯ ಕಾರ್ಯಕಾರಿ ಸಭೆ ಕರೆದು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಐವರು ಸಂಸದರನ್ನು ವಜಾ ಮಾಡಿದ್ದಾರೆ.